ವಿರಾಜಪೇಟೆಯಲ್ಲಿ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ಪ್ರತಿಭಟನೆ

ಮಡಿಕೇರಿ ಜು.15 : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿವಾಸದ ಮೇಲೆ ದಾಳಿ ಮಾಡಿ ಹಾನಿ ಉಂಟು ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿತು.
ತಾಲ್ಲೂಕು ಕಛೇರಿಯ ಆವರಣದಲ್ಲಿ ಮಾತನಾಡಿದ ಪ.ಪಂ ಮಾಜಿ ಸದಸ್ಯ ವಿ.ಕೆ.ಸತೀಶ್ ಕುಮಾರ್ ಅವರು ಮಾತನಾಡಿ ಡಾ.ಅಂಬೇಡ್ಕರ್ ಅವರ ಮನೆ ಮೇಲೆ ದಾಳಿ ಮಾಡಿ ಆದರ್ಶ ವ್ಯಕ್ತಿತ್ವವನ್ನು ಅಪಮಾನಿಸಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
ದೀನ ದಲಿತರು ಹಾಗೂ ದುರ್ಬಲರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿವೆ ಎಂದು ಆರೋಪಿಸಿದರು.
ದೇಶದ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿಯ ಮನೆಯ ಮೇಲೆ ದಾಳಿಯಾಗಿದೆಯೆಂದಾದರೆ ಸಾಮಾನ್ಯ ಜನರ ಗತಿಯೇನು ಎಂದು ಪ್ರಶ್ನಿಸಿದರು. ಘಟನೆ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸತೀಶ್ ಕುಮಾರ್ ಒತ್ತಾಯಿಸಿದರು.
ಪ.ಪಂ ಸದಸ್ಯ ಹೆಚ್.ಎಸ್.ಮತೀನ್, ಮಾಜಿ ಉಪಾಧ್ಯಕ್ಷ ಚಂದ್ರಶೇಖರ್, ಪ್ರಮುಖರಾದ ವಿಶ್ವನಾಥ್, ರಾಕೇಶ್(ಚುಮ್ಮ) ಸಾಗರ್ ಮತ್ತಿತರರು ಹಾಜರಿದ್ದು ತಹಶೀಲ್ದಾರ್ ರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.