ಮಡಿಕೇರಿಯ ಕೋವಿಡ್ ಕೇರ್ ಸೆಂಟರ್ ನ ಬಗ್ಗೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ : ಜಿಲ್ಲಾಧಿಕಾರಿ ಸ್ಪಷ್ಟನೆ

16/07/2020

ಮಡಿಕೇರಿ ಜು. 16 : ಮಡಿಕೇರಿಯ ಕೋವಿಡ್ ಕೇರ್ ಸೆಂಟರ್ ನ ಬಗ್ಗೆ ಮಾಡಿರುವ ಆರೋಪವು ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಕೋವಿಡ್ ಕೇರ್ ಸೆಂಟರ್ ನ್ನು ನವೋದಯ ಶಾಲೆ ಮಡಿಕೇರಿಯಲ್ಲಿ ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕಿತ ಪ್ರಕರಣಗಳು ಅತಿಹೆಚ್ಚು ಕಂಡುಬರುತ್ತಿರುವುದರಿಂದ ರೋಗ ಲಕ್ಷಣ ಇಲ್ಲದ ಮತ್ತು ಉತ್ತಮ ಆರೋಗ್ಯ ಸ್ಥಿತಿ ಇರುವ ಸೋಂಕಿತರನ್ನು( Asymptomatic) ಪ್ರತ್ಯೇಕವಾಗಿ ಇರಿಸುವ ಸಲುವಾಗಿ ಸದರಿ ಕೇಂದ್ರವನ್ನು ಉಪಯೋಗಿಸಲಾಗುತ್ತಿದೆ ಎಂದರು.

ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರನ್ನು ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳಲಾಗುತ್ತಿದೆ. ಸದರಿ ಹಾಸ್ಟೆಲ್ ಯಾವುದೇ ಅನುಪಯುಕ್ತ ಕಟ್ಟಡವಾಗಿರದೆ ನವೋದಯ ಶಾಲಾ ಮಕ್ಕಳು ಬಳಸುತ್ತಿದ್ದ ಉಪಯೋಗಿಸಲು ಯೋಗ್ಯವಾದ ಕಟ್ಟಡವಾಗಿದ್ದು, ಎಲ್ಲಾ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿರುತ್ತಾರೆ.

ಇಲ್ಲಿಯ ಸೋಂಕಿತರಿಗೆ ಜಿಲ್ಲಾಡಳಿತದ ವತಿಯಿಂದ ಬ್ಲಾಂಕೆಟ್,ಹೊದಿಕೆಗಳನ್ನುನೀಡಲಾಗುತ್ತಿದ್ದು, ಸ್ನಾನದ ವ್ಯವಸ್ಥೆಗಾಗಿ ಹೊಸದಾಗಿ ಗೀಸರ್ ವ್ಯವಸ್ಥೆಯನ್ನುವಮಾಡಿಕೊಡಲಾಗಿದೆ. ಕುಡಿಯಲು ಬಿಸಿನೀರಿನ ವ್ಯವಸ್ಥೆಗಾಗಿ ಕೆಟಲ್ ಗಳನ್ನು ಪೂರೈಸಲಾಗಿದೆ. ಶೌಚಾಲಯಗಳಲ್ಲಿ ಫಿನಾಯಿಲ್, ಸೋಪುಗಳನ್ನು ನೀಡಲಾಗುತ್ತಿದೆ. ಮೊಬೈಲ್ ಚಾರ್ಜರ್ ಗಳ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.

ಈ ಕಟ್ಡಡದಲ್ಲಿ ಒಟ್ಟು 8 ಡಾರ್ಮಿಟರಿಗಳಿದ್ದು ಹೆಂಗಸರು ಹಾಗು ಗಂಡಸರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರ ಆರೋಗ್ಯ ತಪಾಸಣೆಗಾಗಿ 24×7 ಸದರಿ ಕೇಂದ್ರದಲ್ಲಿಯೇ ವಾಸವಿರುವ ನುರಿತ ವೈದ್ಯರು ಹಾಗು ದಾದಿಯರು ಲಭ್ಯವಿದ್ದು, ನಿಯಾಮಾನುಸಾರ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಅಲ್ಲದೆ ಆರೋಗ್ಯ ಇಲಾಖೆಯ ನಿಯಮದಂತೆ ಸೋಂಕಿತರಿಗೆ ಆಹಾರದ ಮೆನು ಸಿದ್ದ ಪಡಿಸಿದ್ದು ಅದರಂತೆ ಊಟ/ತಿಂಡಿಯನ್ನು ಪೂರೈಸಲಾಗುತ್ತಿದೆ. ಅಲ್ಲದೆ ಉಪಯೋಗಿಸಿ ಎಸೆಯಬಹುದಾದ (Disposable) ಪರಿಕರಗಳಲ್ಲಿ ಊಟ ನೀಡುವಂತೆ ಆರೋಗ್ಯ ಇಲಾಖೆಯ ನಿಯಮವಿದ್ದು, ಅದರಂತೆ ಕ್ರಮ ವಹಿಸಿ ತ್ಯಾಜ್ಯವನ್ನು ಮೆಡಿಕಲ್ ಕಾಲೇಜಿನ ಬಯೋ ಮೆಡಿಕಲ್ ವೆಸ್ಟ್ ಮ್ಯಾನೆಜ್‌ಮೆಂಟ್‌ ವತಿಯಿಂದ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಅಲ್ಲದೆ ತಹಶೀಲ್ದಾರ್ ಮತ್ತು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳು ಪ್ರತೀ ದಿನ ಈ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯರೊಬ್ಬರು ಚಿಕಿತ್ಸೆಯ ಜವಾಬ್ದಾರಿ ವಹಿಸಿದ್ದಾರೆ. ಪ್ರತೀ ದಿನ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರತೀ ರೋಗಿಗಳಿಗೆ ಕರೆ ಮಾಡಿ ಅವರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಈ ಸೆಂಟರ್ ನ ಮೇಲುಸ್ತುವಾರಿ ನಡೆಸಲು ಐಎಫ್ಎಸ್ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಆದ್ದರಿಂದ ಮಡಿಕೇರಿಯ ಕೋವಿಡ್ ಕೇರ್ ಸೆಂಟರ್ ನ ಬಗ್ಗೆ ಮಾಡಿರುವ ಆರೋಪವು ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.