ಸ್ನೇಹ ತೀರಂ ವಾಟ್ಸಾಪ್ ಗ್ರೂಪ್ ಸದಸ್ಯರಿಂದ ಕೊರೋನಾ ವಾರಿಯರ್ಸ್‍ಗೆ ಸನ್ಮಾನ

16/07/2020

ಮಡಿಕೇರಿ ಜು. 16 : ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಿದ ಹಿನ್ನೆಲೆ ಹಗಲಿರುಳು ಅತ್ಯುತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸಿದ ಕೊರೊನಾ ವಾರಿರ್ಸ್ ಗಳಿಗೆ ಹುಂಡಿ ಗ್ರಾಮದ ಸ್ನೇಹ ತೀರಂ ವಾಟ್ಸಪ್ ಗ್ರೂಪ್ ನ ಸದಸ್ಯರುಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ಸನ್ಮಾನಿಸಿ ಗೌರವಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸಜಿ ತೋಮಸ್ ಮಾತನಾಡಿ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಹುಂಡಿ ಗ್ರಾಮದಲ್ಲಿ ನೂರಾರು ಕಾರ್ಮಿಕ ಕುಟುಂಬಗಳು ವಾಸವಾಗಿದ್ದು ಇತ್ತೀಚೆಗೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೀಲ್ ಡೌನ್ ಮಾಡಲಾಗಿತ್ತು. ಇಲ್ಲಿನ ಜನರು ಅತ್ಯಂತ ಸಮಸ್ಯೆಗಳಲ್ಲಿ ಸಿಲುಕಿಕೊಂಡು ಆಹಾರಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು .
ಗ್ರಾಮದ ಮರ್ಕಜ್ ಪಬ್ಲಿಕ್ ಶಾಲೆ ,ಮುಸ್ಲಿಂ ಜಮಾಅತ್ , ಕಾರುಣ್ಯ ಸಹಾಯ ನಿಧಿ ಸಂಘಟನೆ ,ವಿದೇಶದಲ್ಲಿ ನೆಲೆಸಿರುವ ಇಸ್ಮಾಯಿಲ್ ,ಸಿದ್ದಾಪುರದ ತರಕಾರಿ ವ್ಯಾಪಾರಿ ಅಶ್ರಫ್,ಹುಂಡಿ ನಿಯಾಜ್ ಸೇರಿದಂತೆ ಹಲವಾರು ದಾನಿಗಳು ಜಾತಿ ಮತ ಭೇದವಿಲ್ಲದೆ ಹಾಲು, ಮೀನು, ಕೋಳಿ ಮಾಂಸ,ಮೊಟ್ಟೆ ಸೇರಿದಂತೆ ಹಲವು ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹುಂಡಿ ಗ್ರಾಮದ ಸೀಲ್ ಡೌನ್ ವ್ಯಾಪ್ತಿಯ ಪ್ರದೇಶವನ್ನು ಹಗಲಿರುಳು ಶ್ರಮವಹಿಸಿ ಸೇವೆ ಸಲ್ಲಿಸಿದ ಪೊಲೀಸ್, ಆರೋಗ್ಯ, ಆಶಾ, ಅಂಗನವಾಡಿ ಹಾಗೂ ಸಮಾಜ ಸೇವ ಸಂಘಟನೆ ಕಾರ್ಯವನ್ನು ಶ್ಲಾಘಿಸಿದರು.
ಯಾವುದೇ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿ ಹಾಗೂ ಹಿತದೃಷ್ಟಿಯಿಂದ ನಾವೆಲ್ಲರೂ ಒಗ್ಗಟ್ಟಾಗಿ ಮುನ್ನಡೆದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದರು .
ಪೊಲೀಸ್ ಇಲಾಖೆಯ ರತನ್, ಮೋಹನ್, ಭರತ್, ಆರೋಗ್ಯ ಇಲಾಖೆಯ ಸುಧಾ, ಅಂಗನವಾಡಿ ಕಾರ್ಯಕರ್ತೆ ಸುನೀತಾ,
ಸಮಾಜ ಸೇವಕ ಸಮೀರ್ ಸೇರಿದಂತೆ ಮತ್ತಿತರರಿಗೆ ಹಣ್ಣು ಹಂಪಲು ನೀಡಿ ಸನ್ಮಾನಿಸಿ ಗೌರವಿಸಿದರು,
ಈ ಸಂದರ್ಭ ಸ್ನೇಹ ತೀರಂ ವಾಟ್ಸಾಪ್ ಗ್ರೂಪ್ ನ ಉಪಾಧ್ಯಕ್ಷ ಉಮ್ಮರ್, ಕಾರ್ಯದರ್ಶಿ ಜಾಫರ್ ,ಸದಸ್ಯರುಗಳಾದ ಅಬು ತಾಹಿರ್ ,ಯೂನಸ್, ಹಕೀಂ, ಸರ್ಫುದ್ದೀನ್ ,ಅಯ್ಯೂಬ್, ಇಸ್ಮಾಯಿಲ್, ಮೊಹಮ್ಮದ್, ಶರೀಫ್ ಹಾಗೂ ಗ್ರಾಮದ ಪ್ರಮುಖರಾದ ಹುಸೈನ್, ಭಾನುಮತಿ, ಸೈದು, ಚೇಕು, ಮೂಸ ಸೇರಿದಂತೆ ಮತ್ತಿತರರು ಇದ್ದರು .