ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 238ಕ್ಕೆ ಏರಿಕೆ

16/07/2020

ಮಡಿಕೇರಿ ಜು. 16 : ಕೊಡಗು ಜಿಲ್ಲೆಯಲ್ಲಿ ಬುಧವಾರ 28 ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಬೆನ್ನಲ್ಲೇ ಗುರುವಾರ ಮಧ್ಯಾಹ್ನದ ವೇಳೆಗೆ ಮತ್ತೆ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಎಮ್ಮೆಗುಂಡಿ ರಸ್ತೆಯ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ 55 ಹಾಗೂ 28 ವರ್ಷದ ಮಹಿಳೆಯರು ಹಾಗೂ 3 ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದ್ದು, ಕುಶಾಲನಗರದ ಬೈಚನಹಳ್ಳಿಯ ಡೀಸೆಲ್ ಕೇರ್ ಮುಂಭಾಗದ 64 ವರ್ಷದ ಮಹಿಳೆಯಲ್ಲೂ ಸೋಂಕು ಕಾಣಿಸಿಕೊಂಡಿದೆ. ಈಕೆಗೆ ಮೈಸೂರಿನ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿರುವುದಾಗಿ ಹೇಳಲಾಗಿದೆ.

ವೀರಾಜಪೇಟೆ ತಾಲೂಕಿನ ವಿವಿಧೆಡೆಗಳಲ್ಲಿ ಗುರುವಾರ 8 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಗೋಣಿಕೊಪ್ಪದ ಅಚ್ಚಪ್ಪ ಲೇಔಟ್‍ನ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ 23, 58 ಹಾಗೂ 63 ವರ್ಷದ ಮಹಿಳೆಯರು ಹಾಗೂ 57 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದ್ದು, ವೀರಾಜಪೇಟೆ ತಾಲೂಕಿನ ಲಕ್ಕುಂದ ಗ್ರಾಮದ 20 ವರ್ಷದ ಮಹಿಳೆ, ಬೆಂಗಳೂರು ಪ್ರಯಾಣದ ಇತಿಹಾಸವಿರುವ ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯ 26 ವರ್ಷದ ಮಹಿಳೆಯಲ್ಲಿ ಸೋಂಕು ಕಂಡುಬಂದಿದೆ.

ಮತ್ತೊಂದೆಡೆ ಗೋಣಿಕೊಪ್ಪಲು ಸಮೀಪದ ಅರುವತ್ತೊಕ್ಲುವಿನ ವಿದ್ಯಾನಿಕೇತನ ರಸ್ತೆಯ 39 ವರ್ಷದ ಆರೋಗ್ಯ ಕಾರ್ಯಕರ್ತೆ ಹಾಗೂ ಆಕೆಯ 43 ವರ್ಷದ ಪತಿಯಲ್ಲಿ ಸೋಂಕು ದೃಢಪಟ್ಟಿದ್ದು, ಇನ್ನೊಂದೆಡೆ ಮಡಿಕೇರಿಯ ದೇಚೂರು ಗಣಪತಿ ದೇವಸ್ಥಾನ ಬಳಿಯ ಜ್ವರ ಲಕ್ಷಣವಿದ್ದ 21 ವರ್ಷದ ಯುವಕನಲ್ಲೂ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

120 ಸಕ್ರಿಯ-115 ಬಿಡುಗಡೆ: ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 238ಕ್ಕೇರಿದ್ದು, ಇವರಲ್ಲಿ 115 ಮಂದಿ ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 120 ಸಕ್ರಿಯ ಪ್ರಕರಣಗಳಿದ್ದು ಮೂರು ಮಂದಿ ಸಾವಿಗೀಡಾಗಿದ್ದಾರೆ.

102 ನಿಯಂತ್ರಿತ ಪ್ರದೇಶಗಳು: ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ ಕುಶಾಲನಗರ ಬೈಚನಹಳ್ಳಿಯ ಡೀಸೆಲ್ ಕೇರ್ ಮುಂಭಾಗ, ಮಡಿಕೇರಿ ದೇಚೂರು ಗಣಪತಿ ದೇವಸ್ಥಾನ ಬಳಿ, ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆ ಹಾಗೂ ಗೋಣಿಕೊಪ್ಪ ಅರುವತ್ತೊಕ್ಲುವಿನ ವಿದ್ಯಾನಿಕೇತನ ರಸ್ತೆಯಲ್ಲಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಇದರೊಂದಿಗೆ ನಿಯಂತ್ರಿತ ಪ್ರದೇಶಗಳ ಸಂಖ್ಯೆ 102ಕ್ಕೇ ಏರಿಕೆಯಾಗಿದೆ. ಮಡಿಕೇರಿಯ ಡೈರಿ ಫಾರಂ ಹಾಗೂ ಗೋಣಿಕೊಪ್ಪದ ಕೆಇಬಿ ರಸ್ತೆಯ ನಿಯಂತ್ರಿತ ಪ್ರದೇಶಗಳನ್ನು ಗುರುವಾರದಿಂದ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.