ಕೋವಿಡ್ ಕೇರ್ ಸೆಂಟರ್ ಗೆ ಜಿಲ್ಲಾಧಿಕಾರಿ ಭೇಟಿ : ಪರಿಶೀಲನೆ

ಮಡಿಕೇರಿ ಜು.16 : ನಗರದ ಹೊರವಲಯದ ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಗುರುವಾರ ಭೇಟಿ ನೀಡಿ ವೀಕ್ಷಿಸಿದರು.
ವಿಶೇಷ ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಕೋವಿಡ್ ಸೋಂಕಿತರೊಂದಿಗೆ ಈ ಸಂದರ್ಭ ಸಮಾಲೋಚಿಸಲಾಯಿತು. ಕೋವಿಡ್ ಕೇರ್ ಸೆಂಟರ್‍ನ ದ್ವಾರದಲ್ಲಿ ದಿನದ 24 ಗಂಟೆಗಳಲ್ಲಿಯೂ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯು ನಿಗಧಿಪಡಿಸಿರುವ ಮೆನುವಿನಂತೆ ಕೋವಿಡ್ ಸೋಂಕಿತರಿಗೆ ಆಹಾರವನ್ನು ಸಕಾಲದಲ್ಲಿ ಪೂರೈಸಲಾಗುತ್ತಿದೆ ಎಂದರು.
ಆರೋಗ್ಯ ಇಲಾಖೆಯು ನಿಗಧಿಪಡಿಸಿರುವ ಚಿಕಿತ್ಸಾ ಪದ್ಧತಿಯಂತೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಗಲು ವೇಳೆಯಲ್ಲಿ ಮೂವರು ನರ್ಸ್ ಮತ್ತು ರಾತ್ರಿ ವೇಳೆಯಲ್ಲಿ ಇಬ್ಬರು ನರ್ಸ್‍ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ವಾಸಕೋಶ ತಜ್ಞರ ಸಲಹೆಯಂತೆ ಒಬ್ಬ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ಸೋಂಕಿತರ ಯೋಗ ಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೋವಿಡ್ ಸೋಂಕಿತರಿಗೆ ಹಾಸಿಗೆ, ಬೆಡ್ ಶೀಟ್, ಹೊದಿಕೆ, ಬಿಸಿ ನೀರಿಗಾಗಿ ಕೆಟಲ್, ಮೊಬೈಲ್ ಚಾಜಿರ್ಂಗ್ ಸೌಲಭ್ಯ, ವಾಟರ್ ಹೀಟರ್ ಕಾಯಲ್‍ಗಳನ್ನು ಒದಗಿಸಲಾಗಿದೆ. ಕೋವಿಡ್ ಕೇರ್ ಸೆಂಟರ್‍ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆಯೊಂದಿಗೆ ವಾರ್ಡ್‍ಗಳನ್ನು ನೀಡಲಾಗಿದೆ. ಇಲ್ಲಿಯವರೆಗೆ ಮಹಿಳಾ ವಾರ್ಡ್‍ಗಳಲ್ಲಿ ಸೋಂಕಿತರು ಇರುವುದಿಲ್ಲ ಮತ್ತು ಪುರುಷರ ವಾರ್ಡ್ ನಲ್ಲಿ 07 ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಮಹಿಳಾ ಸೋಂಕಿತರನ್ನು ಈ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಿದಲ್ಲಿ, ಆತಂಕ ಪಡುವ ಅಗತ್ಯವಿಲ್ಲ. ಈ ಸೆಂಟರ್‍ನಲ್ಲಿ ಮಹಿಳಾ ಪೆÇಲೀಸ್ ಪೇದೆಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಮಹಿಳೆಯರಿಗಾಗಿಯೇ ಪ್ರತ್ಯೇಕ ವಾರ್ಡ್ ಸೌಲಭ್ಯದೊಂದಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಅಲ್ಲದೆ ಕೋವಿಡ್ ಕೇರ್ ಸೆಂಟರ್‍ನ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಮರ್ಪಕ ರೀತಿಯಲ್ಲಿ ವಿಲೇಗೊಳಿಸಲಾಗುತ್ತಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಎಲ್ಲರೂ ಕೋವಿಡ್ ಕೇರ್ ಸೆಂಟರ್‍ನಲ್ಲಿ ನೀಡಲಾಗುತ್ತಿರುವ ಆಹಾರ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿರುತ್ತಾರೆ. ಅಲ್ಲದೆ ಈ ಸೆಂಟರ್‍ನಲ್ಲಿ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಮತ್ತು ನರ್ಸ್ ರವರ ಸೇವೆಗೆ ಕೃತಜ್ಞತೆ ಸಲ್ಲಿಸಿರುತ್ತಾರೆ.
ಈ ಕೋವಿಡ್ ಕೇರ್ ಸೆಂಟರ್‍ನ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ವಚ್ಛತೆಗಾಗಿ ಬರುತ್ತಿದ್ದ ಪಂಚಾಯತಿಯ ಗ್ರೂಪ್ ಡಿ ನೌಕರರೊಬ್ಬರು ಕೆಲಸ ಬಿಟ್ಟಿದ್ದರಿಂದ ಸಮಸ್ಯೆ ಉದ್ಭವಿಸಿದ್ದು, ಕೂಡಲೇ ಹೊಸ ನೌಕರರೊಬ್ಬರನ್ನು ಸ್ವಚ್ಛತೆ ಕೆಲಸಕ್ಕಾಗಿ ನಿಯೋಜಿಸುವಂತೆ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕೋವಿಡ್ ಸಂಬಂಧ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಡಳಿತದಿಂದ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಿದ್ದು, ಸಾರ್ವಜನಿಕರು ಸುಳ್ಳು ವದಂತಿಗಳಿಗೆ ಕಿವಿಗೊಡದೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕೋವಿಡ್ ಕೇರ್ ಸೆಂಟರ್ ನೋಡಲ್ ಅಧಿಕಾರಿ ನಿಲೇಶ್ ಶಿಂಧೆ, ತಹಶೀಲ್ದಾರ್ ಮಹೇಶ್, ತಾ.ಪಂ.ಇಒ ಪಿ.ಲಕ್ಷ್ಮಿ ಇತರರು ಇದ್ದರು.



