ಕೊರೋನಾ ವೈರಸ್ ತಡೆಗಟ್ಟಲು ಜಾಗೃತಿ ಸಮಿತಿ ರಚನೆ

16/07/2020

ಮಡಿಕೇರಿ ಜು. 16 : ಸೋಮವಾರಪೇಟೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಣ ಜಾಗೃತಿ ಉಸ್ತುವಾರಿ ಸಮಿತಿ ರಚಿಸಲಾಯಿತು.
ಮುಖ್ಯಾಧಿಕಾರಿ ನಾಚಪ್ಪ ನವರ ಅಧ್ಯಕ್ಷತೆಯಲ್ಲಿ ಪಂಚಾಯ್ತಿ ಸಭಾಂಗಣದಲ್ಲಿ ಚುನಾಯಿತ ಹಾಗೂ ನಾಮನಿರ್ದೆಶಿತ ಸದಸ್ಯರ ಸಭೆ ನಡೆಯಿತು. ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 11 ವಾರ್ಡ್‍ಗಳಲ್ಲಿ ಕೋವಿಡ್ 19ರ ವೈರಾಣು ಹರಡದಂತೆ ಮುಂಜಾಗ್ರತೆ ವಹಿಸುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಾರ್ಡ್ ಸದಸ್ಯರ ಅಧ್ಯಕ್ಷತೆಯಲ್ಲಿ ಎಂಟು ಜನರನ್ನೊಳಗೊಂಡ ಉಸ್ತುವಾರಿ ಸಮಿತಿಯನ್ನು ರಚಿಸಲಾಯಿತು.
ಆಯಾ ವಾರ್ಡಿನ ಸದಸ್ಯರು ಅಧ್ಯಕ್ಷರಾಗಿಯೂ ಬೂತ್ ಮಟ್ಟದ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿಯೂ ಪಟ್ಟಣ ಪಂಚಾಯ್ತಿಯ ಸಿಬ್ಬಂದಿ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಸ್ವಯಂ ಸೇವಾ ಸಂಘದ, ಸ್ವಸಹಾಯ ಸಂಘದ ಹಾಗೂ ಸಮಾಜ ಸೇವಕರು ಓರ್ವರು ಸೇರಿದಂತೆ ಸಮಿತಿ ಅಸ್ತಿತ್ವಕ್ಕೆ ಬರಲಿದೆ.
ಕೊರೋನಾ ನಿಯಂತ್ರಣ ಹಾಗೂ ಜಾಗೃತಿ ಬಗ್ಗೆ ಅರಿವು ಮೂಡಿಸುವುದು ಪ್ರತಿದಿನ ಸಭೆ ಸೇರಿ ಚರ್ಚೆ ನಡೆಸಿ ವರದಿ ಸಲ್ಲಿಸುವುದು, ಮನೆಗಳಿಗೆ ನೀರು ಸಂಸ್ಕರಣ ಘಟಕಳಿಗೆ ಭೇಟಿ ನೀಡಿ ಪರಿಶೀಲಿಸುವುದು ವಾರ್ಡ್‍ಗಳಲ್ಲಿ ಜನರು ಗುಂಪು ಸೇರಿದಂತೆ ನೋಡಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ವಹಿಸುವುದು ಸೇರಿದಂತೆ ಹಲವು ಜವಬ್ದಾರಿಗಳನ್ನು ಸಮಿತಿ ನಿರ್ವಹಿಸಬೇಕಿದೆ.
ಪಟ್ಟಣದ ನಾಗರೀಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡುವುದು, ಭಿತ್ತಿ ಪತ್ರಗಳನ್ನು ಮಾಡಿ ಮನೆ ಮನೆಗಳಿಗೆ ಹಂಚುವುದು, ಅಂಗಡಿಗಳಲ್ಲಿ ಪೊಸ್ಟರ್ಸ್ ಹಾಕುವುದು, ಜಾಗೃತಿ ಸಮಿತಿ ಸದಸ್ಯರಿಗೆ ಮಾಸ್ಕ್ ಹಾಗು ಸ್ಯಾನಿಟೈಸರ್ ನೀಡುವ ಬಗ್ಗೆ ಚರ್ಚೆ ನಡೆಯಿತು. ಸ್ವಸಹಾಯ ಸಂಘದ ಪ್ರತಿನಿಧಿ ಹಾಗೂ ಸಮಾಜ ಸೇವಕರೋರ್ವರನ್ನು ಸಮಿತಿಗೆ ಸೇರಿಕೊಳ್ಳಲು ಸಮಿತಿಯ ಅಧ್ಯಕ್ಷರಿಗೆ ಅವಕಾಶ ನೀಡಲಾಯಿತು.
ಸಭೆಯಲ್ಲಿ ಸದಸ್ಯರುಗಳಾದ ನಳಿನಿ ಗಣೇಶ್, ಶೀಲಾ ಡಿಸೋಜ, ಬಿ.ಸಿ. ವೆಂಕಟೇಶ್, ಡಿ.ವಿ. ಉದಯಶಂಕರ್, ಪಿ.ಕೆ. ಚಂದ್ರು, ಜೀವನ್, ಶುಭಕರ್, ನಾಗರತ್ನ, ಬಿ.ಆರ್. ಮಹೇಶ್, ಎಸ್. ಮಹೇಶ್, ಎಸ್.ಆರ್. ಸೋಮೇಶ್, ಶರತ್ ಪಂಚಾಯ್ತಿ ಸಿಬ್ಬಂದಿಗಳಾದ ರೂಪಾ ಮಹೇಂದ್ರ ಹಾಗೂ ರಫಿಕ್ ಇದ್ದರು.