ಕಾಡಾನೆಯನ್ನು ಅಟ್ಟಲು ಕಾಡಾನೆ ಕಾವಲು ಮನೆ

16/07/2020

ಮಡಿಕೇರಿ ಜು. 16 : ನಿತ್ಯವೂ ಅರಣ್ಯದಿಂದ ಹೊರಬರುವ ಕಾಡಾನೆಗಳು ಹಿಂಡು. ಸುತ್ತಲಿನ ಬೆಳೆದುನಿಂತ ತೋಟ, ಗದ್ದೆಗಳನೆಲ್ಲ ದಾಳಿ ಮಾಡುವುದನ್ನು ತಪ್ಪಿಸಲು ಅರಣ್ಯ ಇಲಾಖಾ ಸಿಬ್ಬಂದಿಗಳು ದಾಟಿಬರುವ ಕಾಡಾನೆಗಳನ್ನು ಕಾವಲು ಕಾದು ಅರಣ್ಯದತ್ತ ಓಡಿಸುವುದೇ ನಿತ್ಯದಕಾಯಕವಾಗಿದೆ. ಆದರೆ ಕಾಡಾನೆಗಳ ದಂಡು ಮತ್ತೊಂದು ದಾರಿಹಿಡಿದು ಅರಣ್ಯದಿಂದ ದಾಟಿಬರುತ್ತಿವೆ.
ಅದೇ ರೀತಿ ಚೆಟ್ಟಳ್ಳಿ ಸಮೀಪದ ಮೀನುಕೊಲ್ಲಿ ಮೀಸಲು ಅರಣ್ಯದಿಂದ ರಾತ್ರಿಯಾದಂತೆ ಕಾಡಾನೆಗಳ ಹಿಂಡು ಅರಣ್ಯದಾಟಿ ಬರುತ್ತಿವೆ. ಇದನ್ನು ನಿಯಂತ್ರಿಸಲು ಆರ್‍ಆರ್‍ಟಿ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹಲವು ವರ್ಷಗಳ ಹಿಂದೆ ಎತ್ತರದ ಮರದ ಮೇಲೊಂದು ಮರದಿಂದ ಜೋಡಿಸಿದ ಅಟ್ಟಣಿಗೆಯನ್ನು ಕಟ್ಟಿ ಕಾವಲು ಕಾದು ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯವನ್ನು ಮಾಡುತ್ತಾ ಬರುತಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಆನೆಗೇಟನ್ನು ನಿರ್ಮಿಸಿ ಆನೆಗೆ ತಡೆಒಡ್ಡಿದೆ. ಇದರೊಂದಿಗೆ ನಡುರಾತ್ರಿಯಲ್ಲಿ ಕಾಡಾನೆ ಸದ್ದು ಕೇಳಲೆಂದು ಆನೆದಾಟುವ ಜಾಗದಲ್ಲಿ ತಂತಿಕಟ್ಟಿ ಬಾಟಲಿಗಳನ್ನು ನೇತುಹಾಕಲಾಗಿದೆ.
ಕಳೆದ ಹವಲು ತಿಂಗಳಲ್ಲಿ ಅಟ್ಟಣಿಗೆ ಕಟ್ಟಲಾಗಿದ್ದ ಮರವು ಒಣಗತೊಡಗಿದ ಪರಿಣಾಮ ಅಟ್ಟಣಿಗೆ ಮೇಲೇರಲಾರದೆ ಅರಣ್ಯ ಸಿಬ್ಬಂದಿಗಳು ಅರಣ್ಯ ಮೂಲೆಯಲ್ಲೋ ಮರದ ಕೆಳಗೋ ಕಾಡಾನೆಗಳನ್ನು ಕಾವಲು ಕಾಯುವ ಪರಿಸ್ಥಿತಿಯಾಗಿತ್ತು. ಕಳೆದ 5-6 ತಿಂಗಳ ಹಿಂದೆ ಅರಣ್ಯ ಇಲಾಖೆಯ ಪ್ರಸ್ತಾವನೆಯಂತೆ ಕಾಡಾನೆ ದಾಟುವ ಜಾಗದಲ್ಲಿ ಆನೆ ಕಾವಲು ಮನೆ ಹಾಗೂ ಕಂಡಕರೆಯಲ್ಲಿ ಕಳ್ಳಬೇಟೆ ತಡೆ ಶಿಬಿರವನ್ನು ನಿರ್ಮಾಣ ಮಾಡಲಾಗಿದೆ.
ಜು. 3 ರಂದು ಕುಶಾಲನಗರ ವಲಯದ ದುಬಾರೆ ಆನೆ ಶಿಬಿರದಲ್ಲಿ ನವೀಕರಣಗೊಂಡ ಆನೆಮಹಲ್ ವಿಶ್ರಾಂತಿಗ್ರಹ, ವನ್ಯಜೀವಿ ಚಿಕಿತ್ಸಾ ಕೇಂದ್ರ, ಆನೆ ಮಾವುತರ ಹಾಗೂ ಕಾವಾಡಿಗಳ ವಸತಿಗೃಹ, ಕಾವೇರಿ ನಿಸರ್ಗ ಧಾಮದಲ್ಲಿ ನಿರ್ಮಾಣವಾದ ನೂತನ ಕುಠೀರ, ಮೆಟ್ನಳ್ಳಿ ಕಳ್ಳಬೇಟೆ ಶಿಬಿರವನ್ನು ಶಾಸಕ ಅಪ್ಪಚ್ಚುರಂಜನ್ ಹಾಗೂ ಅರಣ್ಯ ಇಲಾಖೆಯ ಮೇಲಧಿಕಾರಿಗಳು ಉದ್ಘಾಟಿಸಿದರೆ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಕಂಡಕರೆ ವ್ಯಾಪ್ತಿಯಲ್ಲಿ ಕಾಡಾನೆ ಕಾವಲು ಮನೆಯ ಹಾಗೂ ಕಂಡಕರೆ ಕಳ್ಳಬೇಟೆ ಶಿಬಿರವನ್ನು ಅರಣ್ಯ ಇಲಾಖಾ ಮೇಲಾಧಿಕಾರಿಗಳು ಉದ್ಘಾಟಿಸಿದರು. ಈ ಕಟ್ಟಡದಲ್ಲಿ ನೇಮಕ ಮಾಡಲಾದ ಆರ್‍ಆರ್‍ಟಿ ತಂಡ ನಿತ್ಯವೂ ಕಾವಲು ಕಾಯುತ್ತಿದೆ.
ಈ ಕಟ್ಟಡ ಉದ್ಘಾಟನೆಗೊಂಡರೂ ವಿದ್ಯುತ್ ಸಂಪರ್ಕ ಇಲ್ಲದೆ ಸಿಬ್ಬಂದಿಗಳು ಮೇಣದಬತ್ತಿ ಉರಿಸಿಕೊಂಡಿರ ಬೇಕಾದ ಪರಿಸ್ಥಿತಿ ಒಂದೆಡೆಯಾಗಿದೆ. ನಿತ್ಯವೂ ಓಡಾಡುವ ಕಾಡಾನೆಗಳನ್ನು ಓಡಿಸಲು ಪ್ಲಾಸ್ಟಿಕ್ ಪೈಪಿನಲ್ಲಿ ತಯಾರಿಸಿದ ಯಂತ್ರದ ಮೂಲಕ ಸಿಡಿಯುವ ಸದ್ದುಮಾಡಿ ಕಾಡಾನೆಗಳನ್ನು ಕಾಡಿಗೆ ಓಡಿಸುತ್ತಿದ್ದಾರೆ. ನಡುರಾತ್ರಿ ಕಾಡಾನೆಗಳು ನೂತನ ಕಟ್ಟಡದ ಸುತ್ತಲೂ ಸುಳಿದಾಡುತಿದ್ದು ಕಾಡಾನೆಗಳಿಂದ ಕಟ್ಟಡಕ್ಕೆ ಅಪಾಯವಾಗುವ ಸಂಭವವಿದೆ. ಕಟ್ಟಡದ ಸುತ್ತಲೂ ಆನೆಕಂದ ನಿರ್ಮಿಸಿ ಕಟ್ಟಡವನ್ನು ಮೊದಲು ರಕ್ಷಿಸಬೇಕಿದೆ.
ವರದಿ-ಪುತ್ತರಿರ ಕರುಣ್ ಕಾಳಯ್ಯ