ಆಮ್ಲೆಟ್ ಗ್ರೇವಿ ಮಾಡುವ ವಿಧಾನ

July 16, 2020

ಬರೀ ಆಮ್ಲೆಟ್ ಮಾಡಿ ತಿನ್ನುವ ಬದಲು ಅದರಿಂದ ಗಟ್ಟಿಯಾದ ಗ್ರೇವಿ ತಯಾರಿಸಿದರೆ ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು : ಮೊಟ್ಟೆ -4, ಎಣ್ಣೆ -3 ಚಮಚ, ಈರುಳ್ಳಿ -2, ಖಾರದ ಪುಡಿ- ಒಂದರಿಂದ ಒಂದೂವರೆ ಚಮಚ(ನಿಮ್ಮ ರುಚಿಗೆ ತಕ್ಕಷ್ಟು), ಹಸಿ ಮೆಣಸಿನಕಾಯಿ 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಅರಿಶಿಣ ಪುಡಿ ಅರ್ಧ ಚಮಚ  ಕೊತ್ತಂಬರಿ- ಪುಡಿ 2 ಚಮಚ , ಜೀರಿಗೆ ಪುಡಿ- 1 ಚಮಚ, ಟೊಮೆಟೊ ಪೇಸ್ಟ್ -ಅರ್ಧ ಕಪ್(2-3 ಟೊಮೆಟೊ),   ರುಚಿಗೆ ತಕ್ಕ ಉಪ್ಪು, ಗರಂ ಮಸಾಲ – ಅರ್ಧ ಚಮಚ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸಾಸಿವೆ , ಕರಿಬೇವಿನ ಎಲೆ.
ತಯಾರಿಸುವ ವಿಧಾನ:  ಮೊಟ್ಟೆಯನ್ನು ಬಟ್ಟಲಿಗೆ ಹಾಕಿ, 1 ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಗೂ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕದಡಿ, ಆಮ್ಲೆಟ್ ತಯಾರಿಸಿ.  ನಂತರ ಅದನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿಡಿ.  ಈಗ ಪ್ಯಾನ್ ಬಿಸಿ ಮಾಡಿ 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಕರಿಬೇವಿನ ಎಲೆ ಹಾಕಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿ, ನಂತರ ಅರ್ಧ ಕಪ್ ಟೊಮೆಟೊ ಪೇಸ್ಟ್ ಹಾಕಿ 5 ನಿಮಿಷ ಸೌಟ್ ನಿಂದ ಆಡಿಸುತ್ತಾ ಬಿಸಿ ಮಾಡಿ, ನಂತರ ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಅರಿಶಿಣ ಪುಡಿ, ಖಾರದ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ, ನಂತರ ತೆಂಗಿನ ಹಾಲು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಗಟ್ಟಿ ಗ್ರೇವಿಯಾಗುವವರೆಗೆ ಕುದಿಸಿ. ನಂತರ ಕತ್ತರಿಸಿಟ್ಟ ಆಮ್ಲೆಟ್ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಉರಿಯಿಂದ ಇಳಿಸಿದರೆ ಆಮ್ಲೆಟ್ ಗ್ರೇವಿ ರೆಡಿ