ಕೊಬ್ಬರಿ ಎಣ್ಣೆಯ ಔಷಧಿಯ ಗುಣಗಳು

16/07/2020

ದಕ್ಷಿಣ ಭಾರತೀಯರಿಗೆ ಚಿರಪರಿಚಿತವಾದ ಕೊಬ್ಬರಿ ಎಣ್ಣೆಯನ್ನು ನೂರಾರು ವರ್ಷಗಳಿಂದ ಅಡುಗೆ, ಸೌಂದರ್ಯ ಹಾಗೂ ಔಷಧೀಯ ರೂಪದಲ್ಲಿ ಬಳಸಲಾಗುತ್ತಾ ಬರಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೊಬ್ಬರಿ ಎಣ್ಣೆಯನ್ನು ಸುಪರ್ ಫುಡ್ ಅಥವಾ ಅದ್ಭುತ ಆಹಾರದ ಪಟ್ಟಿಯಲ್ಲಿಯೂ ಸೇರಿಸಿಕೊಳ್ಳಲಾಗಿದೆ. ಇದರಲ್ಲಿರುವ ಅಗತ್ಯ ಪ್ರಮಾಣದ ಕೊಬ್ಬಿನ ಆಮ್ಲಗಳು ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನುಂಟುಮಾಡುತ್ತವೆ.

ಇದರಲ್ಲಿ ಕೊಬ್ಬು ಕರಗಿಸುವುದು, ಮೆದುಳಿನ ಕ್ಷಮತೆ ಹೆಚ್ಚುವುದು ಹಾಗೂ ಇತರ ಅದ್ಭುತ ಪ್ರಯೋಜನಗಳೂ ಇವೆ. ಒಣಗಿದ ಕೊಬ್ಬರಿಯನ್ನು ಹಿಂಡಿ ತೆಗೆಯಲಾಗುವ ಕೊಬ್ಬರಿ ಎಣ್ಣೆಯ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿರಲು ನೆರವಾಗುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಒಳ್ಳೆಯ ಕೊಲೆಸ್ಟ್ರಾಲ್ ಆಗಿ ಬದಲಿಸಲೂ ನೆರವಾಗುತ್ತದೆ.

ಕೊಬ್ಬರಿ ಎಣ್ಣೆಯ ನವಿರಾದ ಸುವಾಸನೆ ಆಹಾರವನ್ನು ಹೆಚ್ಚು ಇಷ್ಟವಾಗುವಂತೆ ಮಾಡುತ್ತದೆ. ಕೊಬ್ಬರಿಯ ಮಿಠಾಯಿಗಳು ಹಾಗೂ ಕೊಬ್ಬರಿ ಎಣ್ಣೆಯ ಒಗ್ಗರಣೆ ನೀಡಿದ ಖಾದ್ಯಗಳು ಹೆಚ್ಚು ರುಚಿಕರವಾಗಿರುತ್ತವೆ. ಇದರಲ್ಲಿ ಸುಮಾರು 84 ಶೇಖಡಾ ಪರ್ಯಾಪ್ತ ಕೊಬ್ಬು ಇರುತ್ತದೆ. ಈ ಕೊಬ್ಬು ಹೃದಯದ ಕ್ಷಮತೆ ಹೆಚ್ಚಿಸುತ್ತದೆ ಹಾಗೂ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ಕೊಬ್ಬರಿ ಎಣ್ಣೆಯ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.

ತೂಕ ಇಳಿಸಲು ನೆರವಾಗುತ್ತದೆ : ಇದರಲ್ಲಿರುವ ಮಧ್ಯಮ ಸಂಕೋಲೆಯ ಟ್ರೈಗ್ಲಿಸರೈಡುಗಳ ಕಾರಣ ಈ ಎಣ್ಣೆಯನ್ನು ದಹಿಸಲು ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಅಲ್ಲದೇ ಇದರಲ್ಲಿರುವ ಕೊಬ್ಬಿನ ಆಮ್ಲಗಳು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಹಸಿವನ್ನು ಕಡಿಮೆಯಾಗಿಸುವ ಮೂಲಕ ಹೆಚ್ಚಿನ ಆಹಾರ ಸೇವಿಸದಂತೆ ತಡೆಯುತ್ತದೆ. ಒಟ್ಟಾರೆಯಾಗಿ ಇದು ತೂಕ ಇಳಿಕೆಗೆ ನೆರವಾಗುತ್ತದೆ.

ಅಪಾಯಕರ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ : ಕೊಬ್ಬರಿ ಎಣ್ಣೆಯಲ್ಲಿರುವ ಒಟ್ಟು ಕೊಬ್ಬಿನ ಆಮ್ಲದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಲಾರಿಕ್ ಆಮ್ಲವಿದೆ. ಈ ಲಾರಿಕ್ ಆಮ್ಲ ವೈರಸ್, ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಕ್ಷಮತೆ ಹೊಂದಿದ್ದು ಈ ಮೂಲಕ ಎದುರಾಗುವ ಹಲವಾರು ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ. ಈ ಸೋಂಕುಗಳಿಂದ ರಕ್ಷಣೆ ಪಡೆಯಲು ನಿಮ್ಮ ನಿತ್ಯದ ಅಡುಗೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಮಿತಪ್ರಮಾಣದಲ್ಲಿ ಬಳಸಬೇಕು.

ಸ್ನಾಯುಗಳನ್ನು ಬೆಳೆಸಲು ನೆರವಾಗುತ್ತದೆ : ಇದರಲ್ಲಿರುವ ಮಧ್ಯಮ ಸಂಕೋಲೆಯ ಟ್ರೈಗ್ಲಿಸರೈಡುಗಳು (Medium-chain triglycerides (MCT’s) ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಹಾಗೂ ಹೆಚ್ಚಿನ ಕ್ಯಾಲೋರಿಗಳನ್ನು ದಹಿಸಲು ನೆರವಾಗುತ್ತದೆ. ಅಲ್ಲದೇ ಇವು ಸ್ನಾಯುಗಳನ್ನು ಬೆಳೆಸಲೂ ನೆರವಾಗುತ್ತದೆ. ನಿಮ್ಮ ನಿತ್ಯದ ಪ್ರೋಟೀನ್ ಯುಕ್ತ ಪೇಯದಲ್ಲಿ ಸುಮಾರು ಮೂರು ದೊಡ್ಡ ಚಮಚ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಕುಡಿಯುವ ಮೂಲಕ ಸ್ನಾಯುಗಳು ಹುರಿಗಟ್ಟಲು ನೆರವಾಗುತ್ತದೆ.

ಸ್ಮರಣ ಶಕ್ತಿ ಹೆಚ್ಚುತ್ತದೆ : ಇದರಲ್ಲಿರುವ ಮಧ್ಯಮ ಸಂಕೋಲೆಯ ಟ್ರೈಗ್ಲಿಸರೈಡುಗಳು (Medium-chain triglycerides (MCT’s) ಸ್ಮರಣಶಕ್ತಿಯನ್ನೂ ಹೆಚ್ಚಿಸುತ್ತದೆ. ನಿಯಮಿತವಾಗಿ ಕೊಬ್ಬರಿ ಎಣ್ಣೆಯನ್ನು ಸೇವಿಸುವ ಮೂಲಕ ಮರೆತ ವಿಷಯಗಳನ್ನು ನೆನಪಿಸಿಕೊಳ್ಳುವ ಕ್ಷಮತೆ ಹೆಚ್ಚುತ್ತದೆ. ಏಕೆಂದರೆ ಈ MCTಗಳು ದೇಹದಲ್ಲಿ ಸುಲಭವಾಗಿ ಹೀರಲ್ಪಡುತ್ತವೆ. ಇವು ಮೆದುಳಿಗೂ ಸುಲಭವಾಗಿ ತಲುಪಿ ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಶಕ್ತಿ ದೊರಕುತ್ತದೆ ಹಾಗೂ ತನ್ಮೂಲಕ ಸ್ಮರಣ ಶಕ್ತಿ ಹೆಚ್ಚುತ್ತದೆ.

ಅಂಗಗಳನ್ನು ಆರೋಗ್ಯಕರವಾಗಿರಿಸುತ್ತದೆ : ಕೊಬ್ಬರಿ ಎಣ್ಣೆಯಲ್ಲಿರುವ MCT ಹಾಗೂ ಕೊಬ್ಬಿನ ಆಮ್ಲಗಳು ಯಕೃತ್ ನ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ಏಕೆಂದರೆ ಈ ಪೋಷಕಾಂಶಗಳು ಯಕೃತ್‌ಗೆ ತಲುಪಿದಾಗ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತವೆ ಹಾಗೂ ಯಕೃತ್ ನಲ್ಲಿ ಕೊಬ್ಬು ಉತ್ಪತ್ತಿಯಾಗದಂತೆ ತಡೆಯುತ್ತದೆ. ಅಲ್ಲದೇ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ ಹಾಗೂ ಪಿತ್ತಕೋಶದ ಕಾಯಿಲೆಗಳಿಂದಲೂ ರಕ್ಷಿಸುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ : ಇದರಲ್ಲಿ ನೈಸರ್ಗಿಕ ಪರ್ಯಾಪ್ತ ಕೊಬ್ಬುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟಾಲ್ ಗಳನ್ನು ಒಳ್ಳೆಯ ಕೊಲೆಸ್ಟ್ರಾಲ್ ಆಗಿ ಪರಿವರ್ತಿಸಲು ನೆರವಾಗುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಕೊಬ್ಬರಿ ಎಣ್ಣೆ ಹೆಪಟೈಟಿಸ್, ಸಿಡುಬು ಮತ್ತು ಇತರ ಮಾರಣಾಂತಿಕ ರೋಗಗಳಿಗೆ ಕಾರಣವಾಗುವ ವೈರಸ್ಸುಗಳನ್ನು ಕೊಲ್ಲುವ ಕ್ಷಮತೆ ಪಡೆದಿದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ : ನಮ್ಮ ಆಹಾರದ ಮೂಲಕ ಲಭಿಸುವ ಕೊಬ್ಬಿನಲ್ಲಿ ಕರಗುವ ಮೆಗ್ನೀಶಿಯಂ, ಕ್ಯಾಲ್ಸಿಯಂ ಹಾಗೂ ವಿಟಮಿನ್ನುಗಳನ್ನು ಸುಲಭವಾಗಿ ಹೀರಿಕೊಳ್ಳಲು ಕೊಬ್ಬರಿ ಎಣ್ಣೆ ನೆರವಾಗುತ್ತದೆ. ಅಲ್ಲದೇ ಜೀರ್ಣಾಂಗಗಳ ಒಳಗೆ ಆಶ್ರಯ ಪಡೆದಿದ್ದ ಪರಾವಂಬಿ ಕ್ರಿಮಿಗಳನ್ನು ನಿವಾರಿಸಿ ಜೀರ್ಣಾಂಗಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಜಠರದ ಆಮ್ಲೀಯತೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಹಲ್ಲುಗಳ ಆರೋಗ್ಯ ವೃದ್ಧಿಸುತ್ತದೆ : ಕೊಬ್ಬರಿ ಎಣ್ಣೆ ಹಲ್ಲುಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಅನ್ನು ದೇಹ ಹೆಚ್ಚಾಗಿ ಹೀರಿಕೊಳ್ಳಲು ನೆರವಾಗುತ್ತದೆ ಹಾಗೂ ತನ್ಮೂಲಕ ಹಲ್ಲುಗಳು ಗಟ್ಟಿಯಾಗಲು ನೆರವಾಗುತ್ತದೆ. ಕೊಬ್ಬರಿ ಎಣ್ಣೆಯಿಂದ ಮುಕ್ಕಳಿಸಿಕೊಳ್ಳುವ ಮೂಲಕ ಬ್ಯಾಕ್ಟೀರಿಯಾಗಳ ನಿರ್ಮೂಲನೆ ಸಾಧ್ಯವಾಗುತ್ತದೆ ಹಾಗೂ ಒಸಡಿನ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ತಜ್ಞರ ಪ್ರಕಾರ ವಾರಕ್ಕೆ ಮೂರು ಬಾರಿಯಾದರೂ ಕೊಬ್ಬರಿ ಎಣ್ಣೆಯಿಂದ ಮುಕ್ಕಳಿಸಿಕೊಳ್ಳುವ ಮೂಲಕ ಬಾಯಿ ಹಾಗೂ ಹಲ್ಲುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ.

ಹಾರ್ಮೋನುಗಳ ಸಮತೋಲನೆ ಕಾಪಾಡುತ್ತದೆ : ವಿಶೇಷವಾಗಿ ಮಹಿಳೆಯರ ದೇಹದಲ್ಲಿ ಸ್ರವಿಸುವ ರಸದೂತಗಳು ಸಮತೋಲನ ಕಳೆದುಕೊಂಡರೆ ಇದರ ಪ್ರಭಾವ ವಿಪರೀತವಾಗುತ್ತದೆ. ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಮ್ಲ ರಸದೂತಗಳ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ. ಅದರಲ್ಲೂ ರಜೋನಿವೃತ್ತಿಯ ಸಮಯದಲ್ಲಿ ಕೊಬ್ಬರಿ ಎಣ್ಣೆಯ ಸೇವನೆಯಿಂದ ಲಭಿಸುವ ಕೊಬ್ಬು ಈಸ್ಟ್ರೋಜೆನ್ ರಸದೂತದ ಪ್ರಮಾಣದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನವೊಂದರಲ್ಲಿ ಕಂಡುಕೊಳ್ಳಲಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ : ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಮ್ಲ, ಕ್ಯಾಪ್ರಿಕ್ ಆಮ್ಲ ಹಾಗೂ ಸೂಕ್ಷಜೀವಿಗಳ ವಿರುದ್ದ ಸೆಣಸಾಡುವ ಮೇಧಸ್ಸುಗಳಿವೆ. ಕೊಬ್ಬರಿ ಎಣ್ಣೆಯಲ್ಲಿ ಶಿಲೀಂದ್ರ ನಿವಾರಕ, ಬ್ಯಾಕ್ಟೀರಿಯಾನಿವಾರಕ ಹಾಗೂ ವೈರಸ್ ನಿವಾರಕ ಗುಣಗಳಿದ್ದು ಎಲ್ಲವೂ ಒಟ್ಟಾಗಿ ದೇಹವನ್ನು ಹಲವಾರು ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಧಾಳಿಯಿಂದ ರಕ್ಷಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Coconut milk and coconut oil on wooden table