ಕೋವಿಡ್-19 ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಶ್ರಮಿಸಿ : ಶಾಸಕ ಕೆ.ಜಿ.ಬೋಪಯ್ಯ ಮನವಿ

16/07/2020

ಮಡಿಕೇರಿ ಜು.16 : ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ, ಟಾಸ್ಕ್‍ಪೋರ್ಸ್ ಸಮಿತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಕೋವಿಡ್-19 ನಿಯಂತ್ರಣ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಗುರುವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಟಾಸ್ಕ್‍ಪೋರ್ಸ್ ಸಮಿತಿಯಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಜನಪತ್ರಿನಿಧಿಗಳು ಒಳಗೊಂಡು ಕೋವಿಡ್-19 ನಿಯಂತ್ರಣಕ್ಕೆ ಶ್ರಮಿಸಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳೀಯವಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಕೋವಿಡ್-19 ನಿಯಂತ್ರಣ ಮಾಡಬಹುದಾಗಿದೆ ಎಂದು ಕೆ.ಜಿ.ಬೋಪಯ್ಯ ಅವರು ಸಲಹೆ ಮಾಡಿದರು.
ಹೊರ ದೇಶ, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವವರ ಬಗ್ಗೆ ಕುಟುಂಬದವರು ಮಾಹಿತಿ ನೀಡಬೇಕು. ಕಡ್ಡಾಯವಾಗಿ ಸರ್ಕಾರದ ನಿಯಮ ಪಾಲಿಸಬೇಕು. ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು. ಮನೆಯಿಂದ ಹೊರ ಬರುವವರ ಬಗ್ಗೆ ಸ್ಥಳೀಯರು ಮಾಹಿತಿ ನೀಡಬೇಕು. ಇದರಿಂದ ಕೋವಿಡ್-19 ನಿಯಂತ್ರಿಸಲು ಸಾಧ್ಯ ಎಂದು ಶಾಸಕರು ಹೇಳಿದರು.
ಕೋವಿಡ್-19 ಸಂಬಂಧಿಸಿದಂತೆ ಭಯ ಬೇಡ. ಆದರೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೆ.ಜಿ.ಬೋಪಯ್ಯ ಅವರು ಸೂಚಿಸಿದರು.
ತಿತಿಮತಿ ಸೇರಿದಂತೆ ವಿವಿಧ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಹೊರಡಿಸಿರುವ ಆದೇಶ ಪಾಲಿಸಬೇಕು. ಹಾಗೆಯೇ ನಾಣಚ್ಚಿ ಮತ್ತು ಕಾರ್ಮಾಡು ಗಡಿ ಭಾಗದಿಂದ ಬರುವ ವಾಹನಗಳನ್ನು ತಡೆ ಹಿಡಿಯಬೇಕು. ಯಾವುದೇ ಕಾರಣಕ್ಕೂ ಈ ಭಾಗದಿಂದ ಜಿಲ್ಲೆಗೆ ವಾಹನಗಳ ಪ್ರವೇಶ ನೀಡದಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಎಲ್ಲರೂ ಸಹಕರಿಸಬೇಕಿದೆ ಎಂದು ಅವರು ಹೇಳಿದರು.
ತಹಶೀಲ್ದಾರ್ ನಂದೀಶ್, ಉಪ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ತಾಲ್ಲೂಕು ಪಂಚಾಯತ್ ಇಒ ಷಣ್ಮುಗಂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಇತರರು ಸಭೆಯಲ್ಲಿ ಇದ್ದರು.