ವದಂತಿಗಳಿಗೆ ಕಿವಿಗೊಡದಿರಿ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ

July 16, 2020

ಮಡಿಕೇರಿ ಜು.16 : ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಕೇರ್ ಸೆಂಟರ್‍ನ್ನು ಗಾಳಿಬೀಡು ಬಳಿಯ ನವೋದಯ ಶಾಲೆಯಲ್ಲಿ ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚು ಕಂಡು ಬರುತ್ತಿರುವುದರಿಂದ ರೋಗ ಲಕ್ಷಣ ಇಲ್ಲದ ಮತ್ತು ಉತ್ತಮ ಆರೋಗ್ಯ ಸ್ಥಿತಿ ಇರುವ ಸೋಂಕಿತರನ್ನು (Asymptomatic) ಪ್ರತ್ಯೇಕವಾಗಿ ಇರಿಸುವ ಸಲುವಾಗಿ ಈ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಸೋಂಕಿತರನ್ನು ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳಲಾಗುತ್ತಿದೆ. ನವೋದಯ ಶಾಲಾ ಮಕ್ಕಳು ಬಳಸುತ್ತಿದ್ದ ಉಪಯೋಗಿಸಲು ಯೋಗ್ಯವಾದ ಕಟ್ಟಡವಾಗಿದ್ದು, ಎಲ್ಲಾ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದಾರೆ, ಆದ್ದರಿಂದ ಕೋವಿಡ್ ಕೇರ್ ಸೆಂಟರ್ ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ಬ್ಲಾಂಕೆಟ್, ಹೊದಿಕೆಗಳನ್ನು ನೀಡಲಾಗುತ್ತಿದ್ದು, ಸ್ನಾನದ ವ್ಯವಸ್ಥೆಗಾಗಿ ಹೊಸದಾಗಿ ಗೀಸರ್ ವ್ಯವಸ್ಥೆ ಮಾಡಿಕೊಡಲಾಗಿದೆ. ಕುಡಿಯಲು ಬಿಸಿ ನೀರಿನ ವ್ಯವಸ್ಥೆಗಾಗಿ ಕೆಟಲ್‍ಗಳನ್ನು ಪೂರೈಸಲಾಗಿದೆ. ಶೌಚಾಲಯಗಳಲ್ಲಿ ಫಿನಾಯಿಲ್, ಸೋಪು ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವವರ ಅನುಕೂಲತೆಗಾಗಿ ಮೊಬೈಲ್ ಚಾರ್ಜರ್‍ಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಕಟ್ಡಡದಲ್ಲಿ ಒಟ್ಟು 8 ಡಾರ್ಮಿಟರಿಗಳಿದ್ದು ಹೆಂಗಸರು ಹಾಗೂ ಗಂಡಸರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರ ಆರೋಗ್ಯ ತಪಾಸಣೆಗಾಗಿ 24*7 ಕೇಂದ್ರದಲ್ಲಿಯೇ ವಾಸವಿರುವ ನುರಿತ ವೈದ್ಯರು ಹಾಗು ದಾದಿಯರು ಲಭ್ಯವಿದ್ದು, ನಿಯಾಮಾನುಸಾರ ಚಿಕಿತ್ಸೆ ನೀಡಲಾಗುತ್ತಿದೆ.
ಹಾಗೆಯೇ ಆರೋಗ್ಯ ಇಲಾಖೆಯ ನಿಯಮದಂತೆ ಸೋಂಕಿತರಿಗೆ ಆಹಾರದ ಮೆನು ಸಿದ್ಧಪಡಿಸಿದ್ದು ಅದರಂತೆ ಊಟ/ ತಿಂಡಿ ಪೂರೈಸಲಾಗುತ್ತಿದೆ. ಅಲ್ಲದೆ ಉಪಯೋಗಿಸಿ ಎಸೆಯಬಹುದಾದ ಪರಿಕರಗಳಲ್ಲಿ ಊಟ ನೀಡುವಂತೆ ಆರೋಗ್ಯ ಇಲಾಖೆಯ ನಿಯಮವಿದ್ದು, ಅದರಂತೆ ಕ್ರಮವಹಿಸಿ ತ್ಯಾಜ್ಯವನ್ನು ಮೆಡಿಕಲ್ ಕಾಲೇಜಿನ ಬಯೋ ಮೆಡಿಕಲ್ ವೆಸ್ಟ್ ಮ್ಯಾನೆಜ್‍ಮೆಂಟ್ ವತಿಯಿಂದ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.
ಅಲ್ಲದೆ ತಹಶೀಲ್ದಾರ್ ಮತ್ತು ತಾ.ಪಂ.ಇಒ ಅವರು ಪ್ರತೀ ದಿನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯರೊಬ್ಬರು ಚಿಕಿತ್ಸೆಯ ಜವಾಬ್ದಾರಿ ವಹಿಸಿದ್ದಾರೆ. ಪ್ರತೀ ದಿನ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರತೀ ರೋಗಿಗಳಿಗೆ ಕರೆ ಮಾಡಿ ಅವರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್‍ನ ಮೇಲುಸ್ತುವಾರಿ ನಡೆಸಲು ಐಎಫ್‍ಎಸ್ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

error: Content is protected !!