ಶೇ.63ರಷ್ಟು ಮಂದಿ ಗುಣಮುಖ

ನವದೆಹಲಿ ಜು.17 : ಮಹಾಮಾರಿ ಕೊರೋನಾಗೆ ತುತ್ತಾಗಿರುವವರ ಪೈಕಿ ಶೇ.63ರಷ್ಟು ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಅಂಕಿ ಅಂಶಗಳನ್ನು ನೀಡಿದೆ.
ಭಾರತದಲ್ಲಿ ಒಟ್ಟಾರೆ 9.68 ಲಕ್ಷ ಮಂದಿ ಕೊರೋನಾಗೆ ತುತ್ತಾಗಿದ್ದು ಈ ಪೈಕಿ 3,31,146 ಪ್ರಕರಣಗಳು ಮಾತ್ರ ಸಕ್ರಿಯವಾಗಿದೆ. ಇದು ದೇಶದ ಒಟ್ಟು ಮೊತ್ತದ ಮೂರನೇ ಒಂದು ಭಾಗವಾಗಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ದೇಶದಲ್ಲಿ ಗುರುವಾರ ದಾಖಲೆಯ 32,695 ಪ್ರಕರಣಗಳು ಪತ್ತೆಯಾಗಿತ್ತು. ಜೂನ್ ಮಧ್ಯಭಾಗದಲ್ಲಿ ಚೇತರಿಕೆಯ ಪ್ರಮಾಣವು ಶೇಕಡಾ 50ಕ್ಕೆ ಏರಿದೆ. ಅಲ್ಲಿಂದ ಚೇತರಿಕೆ ಪ್ರಮಾಣ ಸ್ಥಿರವಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಚಿವಾಲಯ ಹೇಳಿದೆ.
ಒಟ್ಟು ಕೋವಿಡ್ -19 ಪ್ರಕರಣಗಳಲ್ಲಿ ಇದುವರೆಗೆ 63.25 ಶೇಕಡಾ ಚೇತರಿಕೆ ಕಂಡಿವೆ. ಅದೇ ಸಮಯದಲ್ಲಿ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರವಾದ ಕುಸಿತ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 20,783 ಜನರು ಚೇತರಿಸಿಕೊಂಡಿದ್ದಾರೆ. ಇದು ಒಂದು ದಿನದಲ್ಲಿ ಅತಿ ಹೆಚ್ಚು ಚೇತರಿಕೆ ಪ್ರಮಾಣವಾಗಿದೆ. ಒಟ್ಟು ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆಯನ್ನು 6,12,814ಕ್ಕೆ ಏರಿಕೆಯಾಗಿದೆ.
