ಲವಂಗದ ಔಷಧಿಯ ಗುಣಗಳು

17/07/2020

ಲವಂಗ ಖಾರದಿಂದ ಕೂಡಿದ ಪರಿಮಳಯುಕ್ತ ಸಾಂಬಾರ ವಸ್ತು. ಅನೇಕ ವಿಧದಲ್ಲಿ ಉಪಯುಕ್ತ. ಮೂಲತ: ಇಂಡೋನೇಷ್ಯಾದ್ದಾಗಿದ್ದು ಅಲ್ಲಿ ಈಗಲೂ ಕಾಡುಮರವಾಗಿ ಕಂಡುಬರುತ್ತದೆ. ಪೋರ್ಚುಗೀಸರು ಇದನ್ನು ಯುರೋಪಿಗೆ ಒಯ್ದರು. ಭಾರತಕ್ಕೆ ಮಾರಿಷಸ್ ಮೂಲದಿಂದ ಬಂದಿದೆ.

ಉಪಯೋಗಗಳು :
ಹಲ್ಲು ನೋವಿಗೆ ಉತ್ತಮ ಔಷಧಿ. ಕೆಮ್ಮಿಗು ತೆಗೆದುಕೊಳ್ಳಬಹುದು.ಸಾಂಬಾರ್ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುವ ಲವಂಗಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಕಾರಣ ಇದನ್ನು ಆಯುರ್ವೇದ ಔಷಧ, ಟೂಥ್ ಪೌಡರ್, ಪೇಸ್ಟ್ ತಯಾರಿಕೆಯಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ಲವಂಗವನ್ನು ಕರ್ನಾಟಕದ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಬೆಳೆಯುತ್ತಾರೆ.

ಹಲ್ಲುನೋವು ಮತ್ತು ಒಸಡುಗಳ ನೋವಿನಿಂದ ರಕ್ಷಿಸುತ್ತದೆ ಲವಂಗದಲ್ಲಿರುವ ಉರಿಯೂತ ನಿವಾರಕ ಗುಣ ವಿಶೇಷವಾಗಿ ಒಸಡುಗಳ ಸೋಂಕನ್ನು ನಿವಾರಿಸಿ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಒಂದು ವೇಳೆ ನೀವು ಒಸಡುಗಳಲ್ಲಿ ನೋವು ಅಥವಾ ಹಲ್ಲು ನೋವಿನಿಂದ ಬಳಲುತ್ತಿದ್ದರೆ ಲವಂಗದ ಎಣ್ಣೆಯಲ್ಲಿ ಅದ್ದಿದ ಹತ್ತಿಯನ್ನು ಇಟ್ಟುಕೊಳ್ಳುವುದು ಒಂದು ವಿಧಾನವಾಗಿದೆ. ಅಷ್ಟೇ ಅಲ್ಲದೆ ಲವಂಗ ಬೆರೆಸಿ ಕುದಿಸಿದ ಟೀ ಅನ್ನು ಬಾಯಿಗೆ ಹಾಕಿಕೊಳ್ಳುವಷ್ಟು ತಣಿದ ಬಳಿಕ ಬಾಯಿಯಲ್ಲಿ ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಮುಕ್ಕಳಿಸಿ. ವಿಶೇಷವಾಗಿ ನೋವಿರುವ ಹಲ್ಲಿನ ಕಡೆ ಹೆಚ್ಚು ಕಾಲ ಮುಕ್ಕಳಿಸಿ. ಇದರಿಂದ ನೋವಿನಿಂದ ಮೊದಲ ವಿಧಾನಕ್ಕಿಂತಲೂ ಶೀಘ್ರವಾಗಿ ಮತ್ತು ಇನ್ನೂ ಉತ್ತಮವಾದ ಉಪಶಮನ ಸಿಗುತ್ತದೆ.

ಹಾನಿಕಾರ ಬ್ಯಾಕ್ಟೀರಿಯಾ ಕೊಲ್ಲುವುದು :

ಲವಂಗದಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ ಮತ್ತು ಇದು ಸೆಳೆತ, ನಿಶ್ಯಕ್ತಿ ಮತ್ತು ಭೇದಿ ಉಂಟುಮಾಡುವ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ತಡೆಯುವುದು. ಲವಂಗದಿಂದ ಬಾಯಿಯ ಆರೋಗ್ಯವನ್ನು ಕಾಪಾಡಬಹುದು. ಲವಂಗದಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುವ ಗುಣಗಳು ಇವೆ. ಇದರಿಂದ ಹಲ್ಲು ಮತ್ತು ವಸಡಿನ ಸಮಸ್ಯೆ ಕಡಿಮೆಯಾಗುವುದು. ಚಹಾ ಮರದ ಎಣ್ಣೆ ಸಹಿತ ಇತರ ಕೆಲವೊಂದು ಗಿಡಮೂಲಿಕೆಗಳೊಂದಿಗೆ ಲವಂಗ ಬಳಸುವಂತೆ ಆಯುರ್ವೇದವು ಹೇಳುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ :

ಲವಂಗದಲ್ಲಿ ಇರುವಂತಹ ಕೆಲವೊಂದು ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡುವುದು. ಲವಂಗದಲ್ಲಿ ಇರುವಂತಹ ನೈಜೀರಿಕಿನ್ ಎನ್ನುವ ಅಂಸವು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುವುದು. ಯಾಕೆಂದರೆ ನೈಜೀರಿಕಿನ್ ಅಂಶವು ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳಲು ಕೋಶಗಳ ಸಾಮರ್ಥ್ಯ ಸುಧಾರಿಸುವುದು ಮತ್ತು ಇನ್ಸುಲಿನ್ ಉತ್ಪತ್ತಿ ಮಾಡಲು ದೇಹಕ್ಕೆ ನೆರವಾಗುವುದು. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಸರಿಯಾಗಿರುವುದು. ಲವಂಗವು ಮಧುಮೇಹ ನಿಯಂತ್ರಣದಲ್ಲಿಡಲು ಒಳ್ಳೆಯ ಮನೆಮದ್ದು. 6-8 ಲವಂಗಗಳನ್ನು ಬಿಸಿ ನೀರಿನ ಲೋಟಕ್ಕೆ ಹಾಕಿ 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸೋಸಿಕೊಂಡು ನೀರನ್ನು ಕುಡಿಯಿರಿ. ಉಪಹಾರದ ಬಳಿಕ ಪ್ರತಿನಿತ್ಯ ಈ ನೀರನ್ನು ಸೇವಿಸಿ. ಕೆಲವೇ ತಿಂಗಳಲ್ಲಿ ವ್ಯತ್ಯಾಸ ಕಂಡುಬರುವುದು.

ಮೂಳೆಗಳ ಆರೋಗ್ಯ ಸುಧಾರಣೆ:

ಲವಂಗದ ಸಾರದಲ್ಲಿ ಯುಜೆನೊ ಎನ್ನುವ ಅಂಶವಿದೆ. ಇದು ಅಸ್ಥಿರಂಧ್ರತೆ ಸುಧಾರಣೆ ಮಾಡುವುದು ಮತ್ತು ಮೂಳೆಯ ಸಾಂದ್ರತೆ ಮತ್ತು ಬಲ ಹೆಚ್ಚಿಸುವುದು. ಇದರಿಂದ ಮೂಳೆಗಳು ಬೇಗನೆ ಮುರಿಯುವುದು ಅಥವಾ ಬಿರುಕುಬಿಡುವುದು ತಪ್ಪುವುದು. ಮೂಳೆಗಳ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಬೇಕಾಗಿರುವ ಮ್ಯಾಂಗನೀಸ್ ಕೂಡ ಇದರಲ್ಲಿದೆ. ಮೂಳೆಯ ಆರೋಗ್ಯ ಕಾಪಾಡಲು ಪ್ರತಿನಿತ್ಯ ಒಂದು ಚಮಚ ಲವಂಗವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ನೋವು ನಿವಾರಕವಾಗಿ ಕೆಲಸ ಮಾಡುವುದು :

ಸಂಧಿವಾತದ ನೋವನ್ನು ನಿವಾರಿಸಲು ಲವಂಗ ನೆರವಾಗುವುದು. ಲವಂಗದ ಎಣ್ಣೆ, ಅದರ ಪೇಸ್ಟ್ ನ್ನು ಗಂಟು ನೋವಿಗೆ ಹಚ್ಚಿಕೊಂಡರೆ ನೋವು ಶಮನವಾಗುವುದು. ಸಂಧಿವಾತ ಕಡಿಮೆ ಮಾಡಲು ಹಿಂದಿನ ಕಾಲದಿಂದಲೂ ಈ ಮನೆಮದ್ದನ್ನು ಬಳಸಲಾಗುತ್ತಿದೆ. ಹಲ್ಲು ನೋವು ಕಾಡಿದಾಗ ವೈದ್ಯರ ಬಳಿಗೆ ತೆರಳುವ ಮೊದಲು ಒಂದು ಲವಂಗ ಬಾಯಿಗೆ ಹಾಕಿಕೊಂಡು ಜಗಿದರೆ ಅದರಿಂದ ನೋವು ನಿವಾರಣೆಯಾಗುವುದು. ನೋವು ತೀವ್ರವಾಗದಂತೆ ಲವಂಗವು ತಡೆಯುವುದು.

ಲವಂಗ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ :

ಲವಂಗದ ಸೇವನೆಯಿಂದ ಜೀರ್ಣರಸಗಳು ಹೆಚ್ಚು ಸ್ರವಿಸಲು ಪ್ರಚೋದನೆ ಪಡೆಯುತ್ತದೆ. ತನ್ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತದೆ.ಇದರೊಂದಿಗೆ ಲವಂಗ ವಾಯು ಪ್ರಕೋಪವನ್ನು ಶಮನಗೊಳಿಸುತ್ತದೆ ಹಾಗೂ ಹೊಟ್ಟೆಯ ಉರಿ, ವಾಕರಿಕೆ ಹುಳಿತೇಗು ಮೊದಲಾದವುಗಳಿಂದ ರಕ್ಷಿಸುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ :

ನಿಮ್ಮ ನಿತ್ಯದ ಆಹಾರದಲ್ಲಿ ನಿಯಮಿತವಾಗಿ ಲವಂಗವನ್ನು ಬೆರೆಸಿ ಸೇವಿಸುವ ಮೂಲಕ ಟೈಪ್ 1 ಮಧುಮೇಹವನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬಹುದು. ಇದರಲ್ಲಿರುವ ಕೆಲವು ಪೋಷಕಾಂಶಗಳು ಇನ್ಸುಲಿನ್ ನಂತೆಯೇ ಕಾರ್ಯನಿರ್ವಹಿಸುತ್ತವೆ ಹಾಗೂ ತನ್ಮೂಲಕ ರಕ್ತದಲ್ಲಿರುವ ಅಧಿಕ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ.