ಕೊಡಗಿನಲ್ಲಿ ಶನಿವಾರ ಮತ್ತು ಭಾನುವಾರ ಕಟ್ಟುನಿಟ್ಟಿನ ನಿರ್ಬಂಧ

July 17, 2020

ಮಡಿಕೇರಿ ಜು. 17 : ಕೊಡಗು ಜಿಲ್ಲೆಯಲ್ಲಿ ಜು. 15 ರಿಂದ 31ರ ವರೆಗೆ ಎಲ್ಲಾ ಶನಿವಾರ ಮತ್ತು ಭಾನುವಾರಗಳಿಗೆ ಅನ್ವಯಿಸುವಂತೆ ಜಾರಿಗೊಳಿಸಲಾಗಿರುವ ಪೂರ್ಣ ದಿನ ಲಾಕ್ ಡೌನ್ ಅವಧಿಯಲ್ಲಿ ತುರ್ತು, ವೈದ್ಯಕೀಯ, ಕೋವಿಡ್ ಹಾಗೂ ಕಚೇರಿ ಕರ್ತವ್ಯ ನಿಮಿತ್ತ ಅಧಿಕಾರಿ / ಸಿಬ್ಬಂದಿಗಳ ಸಂಚಾರ ಹೊರತುಪಡಿಸಿ ಉಳಿದಂತೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮತ್ತು ವ್ಯಕ್ತಿಗಳ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ನಡೆಸಬಹುದಾದ ಚಟುವಟಿಕೆ ಮತ್ತು ನಿರ್ಬಂಧಗಳು : ಆಸ್ಪತ್ರೆ, ಮೆಡಿಕಲ್ ಶಾಪ್, ಫಾರ್ಮಸಿ, ಲ್ಯಾಬ್, ಡಯಾಲಿಸಿಸ್ ಇತ್ಯಾದಿ ವೈದ್ಯಕೀಯ ಸೇವೆಗಳನ್ನು ನೀಡುವ ಕೇಂದ್ರಗಳು, ಪೆಟ್ರೋಲ್ ಬಂಕ್ ಗಳನ್ನು 24 ಘಿ 7 ತೆರೆಯಬಹುದು. ಪಡಿತರ ವಿತರಿಸುವ ಸರ್ಕಾರಿ ನ್ಯಾಯಬೆಲೆ ಅಂಗಡಿಗಳನ್ನು ನಿಗಧಿತ ಅವಧಿಯಂತೆ ತೆರೆಯಬಹುದು. ಹಾಲು, ದಿನಪತ್ರಿಕೆಗಳ ವಿತರಣೆಗೆ ಬೆಳಗ್ಗೆ 6:00 ಗಂಟೆಯಿಂದ ಪೂರ್ವಾಹ್ನ 9:00 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯೊಳಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ತುರ್ತು, ವೈದ್ಯಕೀಯ, ಅತ್ಯವಶ್ಯಕ, ಸರಕು ಸಾಗಾಣಿಕೆ ಮತ್ತು ಸರ್ಕಾರಿ / ಕೋವಿಡ್-19 ಕರ್ತವ್ಯ ನಿಮಿತ್ತ ಸಂಚರಿಸುವ ವಾಹನಗಳ ಹೊರತಾಗಿ ಉಳಿದಂತೆ ಯಾವುದೇ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ತುರ್ತು, ವೈದ್ಯಕೀಯ, ಕೋವಿಡ್ ಹಾಗೂ ಕಚೇರಿ ಕರ್ತವ್ಯ ನಿಮಿತ್ತ ಅಧಿಕಾರಿ / ಸಿಬ್ಬಂದಿಗಳ ಸಂಚಾರ ಹೊರತುಪಡಿಸಿ ಉಳಿದಂತೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮತ್ತು ವ್ಯಕ್ತಿಗಳ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

ಪ್ರಸ್ತುತ ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ನಡೆಯುತ್ತಿರುವ ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಿರತ ಅಧಿಕಾರಿ / ಸಿಬ್ಬಂದಿಗಳು ಸಂಬಂಧಪಟ್ಟ ಕಚೇರಿ / ಇಲಾಖೆಯಿಂದ ನೀಡಿದ ಗುರುತಿನ ಚೀಟಿಯನ್ನು ಹೊಂದಿರುವುದು ಮತ್ತು ತಪಾಸಣೆ ವೇಳೆ ಹಾಜರುಪಡಿಸುವುದು. ಕಚೇರಿ ಕಾರ್ಯನಿರತ ಅಧಿಕಾರಿ / ಸಿಬ್ಬಂದಿಗಳು ಸಂಬಂಧಪಟ್ಟ ಕಚೇರಿಯಿಂದ ನೀಡಿದ ಗುರುತಿನ ಚೀಟಿಯನ್ನು ಜೊತೆಯಲ್ಲಿ ಇರಿಸಿಕೊಂಡು, ತಪಾಸಣೆ ವೇಳೆ ಕಡ್ಡಾಯವಾಗಿ ಹಾಜರುಪಡಿಸುವುದು. ಪೂರ್ವ ನಿಗಧಿಯಾಗಿದ್ದ ಮದುವೆ ಕಾರ್ಯಕ್ರಮಗಳನ್ನು ನಡೆಸುವುದಿದ್ದಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯ್ತಿ / ನಗರ ಸ್ಥಳೀಯ ಸಂಸ್ಥೆಯಿಂದ ಪಡೆದ ಪೂರ್ವಾನುಮತಿಯ ಮೇರೆಗೆ ಗರಿಷ್ಟ 50 ಮಂದಿ ಮೀರದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಬಹುದಾಗಿದೆ.

ಉಳಿದಂತೆ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಪೊಲೀಸ್, ಗ್ರಾಮ ಪಂಚಾಯ್ತಿ / ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿಯಮಾನುಸಾರ ಕ್ರಮವಹಿಸುವುದು ಮತ್ತು ನಿಗಾವಹಿಸುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

error: Content is protected !!