ಕೊಡಗಿನಲ್ಲಿ ಉತ್ತಮ ಮಳೆ : ನದಿ ನೀರಿನ ಮಟ್ಟ ಏರಿಕೆ

17/07/2020

ಮಡಿಕೇರಿ ಜು.17 : ಕಾವೇರಿನಾಡು ಕೊಡಗಿನಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಾವೇರಿಯ ಉಗಮಸ್ಥಾನ ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಮುಂಗಾರಿಗೆ ಪೂರ್ವಭಾವಿಯಾಗಿ ಭಾಗಮಂಡಲ ನದಿ ಪಾತ್ರದಲ್ಲಿನ ಹೂಳೆತ್ತಿರುವುದರಿಂದ ಕಾವೇರಿಯ ನೀರು ಸಂಪರ್ಕ ರಸ್ತೆಗಳನ್ನು ಆವರಿಸಿಲ್ಲ.
ಕಳೆದೊಂದು ದಿನದ ಅವಧಿಯಲ್ಲಿ ಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಸರಾಸರಿ 2.5 ಇಂಚು ಮಳೆಯಾಗಿದೆ. ನದಿ ಪಾತ್ರದ ನಾಪೋಕ್ಲು ವಿಭಾಗದಲ್ಲಿ ಸರಿ ಸುಮಾರು 5 ಇಂಚಿನಷ್ಟು ಮಳೆಯಾಗಿರುವುದು ಜೀವನದಿಯ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳಗೊಳ್ಳಲು ಕಾರಣವಾಗಿದೆ. ಇನ್ನು ನದಿ ಹರಿದು ಹೋಗುವ ಬಲಮುರಿ, ಸಿದ್ದಾಪುರ, ಕುಶಾಲನಗರ ವಿಭಾಗಗಳಲ್ಲಿಯು ಉತ್ತಮ ಮಳೆÉಯಾಗುತ್ತಿರುವ ಬಗ್ಗೆ ವರದಿಯಾಗದೆ.
ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಇಂದು ಮಧ್ಯಾಹ್ನದ ನಂತರ ಮಳೆಯ ಬಿರುಸು ತಗ್ಗಿದೆ.
::: ದಕ್ಷಿಣ ಕೊಡಗಿನಲ್ಲಿ ಮಳೆ ಬಿರುಸು :::
ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಕ್ಷೀಣಿಸಿದ್ದ ಮುಂಗಾರು ಮತ್ತೆ ಬಿರುಸು ಪಡೆದಿದೆ.
ಅದರಲ್ಲೂ ಕಳೆದ 24 ಗಂಟೆಯಲ್ಲಿ ಘಟ್ಟ ಪ್ರದೇಶ ವ್ಯಾಪ್ತಿಯ ಬಿರುನಾಣಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ಬಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ.
ಬಿರುನಾಣಿ ಗ್ರಾ.ಪಂ.ವ್ಯಾಪ್ತಿಯ ಬಿರುನಾಣಿ- ನ್‍ಟ್ ಕುಂದ್ ರಸ್ತೆ ನಡುವೆ ನದಿ ತುಂಬಿ ಹರಿಯುತ್ತಿದ್ದು, ಇಲ್ಲಿನ ಸೇತುವೆ ಮೇಲೆ 3 ಅಡಿ ಎತ್ತರದ ನೀರು ಹರಿಯುತ್ತಿದೆ. ನ್‍ಟ್ ಕುಂದ್ ಸುತ್ತ ಬ್ರಹ್ಮಗಿರಿ ಅರಣ್ಯ ಸುತ್ತುವರಿದಿದ್ದು, ಈಗ ಇದ್ದ ಏಕೈಕ ರಸ್ತೆ ಮಾರ್ಗವೂ ಕಡಿತವಾಗಿದೆ. ಕಳೆದ ವರ್ಷ ಇದೇ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ನಿರ್ಮಿಸಿದ್ದ ಕಬ್ಬಿಣದ ತೂಗು ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು.
ಈ ಪ್ರದೇಶದಲ್ಲಿ ಸುಮಾರು 12 ಕುಟುಂಬವಿದ್ದು, ಸಂಪರ್ಕ ಕಡಿತದಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈಗ ಇರುವ ಸೇತುವೆಯನ್ನು 10 ಅಡಿ ಎತ್ತರಿಸಿ ನಿರ್ಮಿಸಿದರೆ, ಮಳೆಗೆ ಸೇತುವೆ ಮುಳುಗುವುದನ್ನು ತಡೆಯಬಹುದಾಗಿದೆ.
ನಿರಂತರ ಮಳೆಯಿಂದ ಹಲವು ದಿನ ಸಂಪರ್ಕ ಕಡಿತ ಮುಂದುವರಿದರೆ ಈ ಪ್ರದೇಶದ ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸಬೇಕೆಂದು ಗ್ರಾಮದ ಕರ್ತಮಾಡ ಧನು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಈ ವ್ಯಾಪ್ತಿಯ ಕಕ್ಕಟ್ಟ್ ಪೆÇಳೆ ನದಿ ತುಂಬಿ ಹರಿಯುತ್ತಿದೆ. ಅಲ್ಲದೆ, ಲಕ್ಷ್ಮಣ ತೀರ್ಥ, ರಾಮ ತೀರ್ಥ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.