ಸೋಮವಾರಪೇಟೆಯ 2100 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ಪೂರ್ಣ

18/07/2020

ಸೋಮವಾರಪೇಟೆ ಜು.18 : ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ, 10ಸಾವಿರ ಹೆಕ್ಟೇರ್ ಭತ್ತ ಭೂಮಿಯಲ್ಲಿ 2100 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿಯಾಗಿರುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಚ್.ಎಸ್. ರಾಜಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ನಾಟಿ ಮಾಡುವ ಮೊದಲು ಭತ್ತದ ಸಸಿ ಮಡಿಗಳಲ್ಲಿ ಬೆಂಕಿರೋಗ, ಕೊಳವೆಗಳು, ಥ್ರಿಬ್ಸ್ ಕೀಟಗಳ ಬಾಧೆ ಕಂಡುಬರುವ ಸಾಧ್ಯತೆ ಇರುವುದರಿಂದ, ನಾಟಿ ಮಾಡುವ ಒಂದು ವಾರ ಮುನ್ನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. 10ಲೀಟರ್ ನೀರಿಗೆ 10ಗ್ರಾಂ ಬೆವಾಸ್ಟಿನ್ ಅಥವಾ 6ಗ್ರಾಂ ಟ್ರೈಸೈಕ್ಲೋಜೋಲ್ ಮತ್ತು 20ಮಿ.ಲೀ ಕ್ಲೋರೋಫೈರಿಫಾಸ್ ಅಥವಾ ಎಕಾಲೆಕ್ಸ್ ಮಿಶ್ರಣ ಮಾಡಿ ಸಿಂಪಡಣೆ ಮಾಡಿದರೆ, ರೋಗ ಮತ್ತು ಕೀಟ ಬಾಧೆ ತಡೆಗಟ್ಟಬಹುದು. ನಾಟಿ ಮಾಡಿದ ತಿಂಗಳ ನಂತರ 100 ಲೀ ನೀರಿಗೆ 100ಗ್ರಾಂ ಬೆವಾಸ್ಟಿನ್ ಅಥವಾ 60 ಟ್ರೈಸೈಕ್ಲೋಜೋಲ್ ಮತ್ತು 200 ಮಿ.ಲೀ ಕ್ಲೋರೋಫೈರಿಫಾಸ್ ಅಥವಾ ಎಕಾಲೆಕ್ಸ್ ಮಿಶ್ರಣ ಮಾಡಿ ಒಂದು ಏಕರೆ ಪ್ರದೇಶಕ್ಕೆ ಸಿಂಪಡಿಸಬೇಕು. ಇದರಿಂದ ಬೆಂಕಿರೋಗ ಹಾಗು ಕೀಟಬಾಧೆಯನ್ನು ತಡೆಗಟ್ಟಬಹುದು.
ರೈತರು ತಮ್ಮ ಗದ್ದೆಗಳಲ್ಲಿ ಭತ್ತದ ನಾಟಿ ಮಾಡುವಾಗ 25-30 ದಿನಗಳ ಪೈರನ್ನು ನಾಟಿ ಮಾಡಬೇಕು. ಒಂದು ಚದರ ಮೀಟರ್‍ಗೆ 50 ಗುಣಿ ಬರುವಂತೆ, ಪ್ರತಿ ಗುಣಿಗೆ 2 ರಿಂದ 3 ಸಸಿಗಳನ್ನು ಸೇರಿಸಿ 2 ಇಂಚು ಆಳದಲ್ಲಿ ನಾಟಿ ಮಾಡಬೇಕು. ಇದರಿಂದ ಉತ್ತಮ ಇಳುವರಿ ಪಡೆಯಬಹುದು. ಕೃಷಿ ಇಲಾಖೆಯಿಂದ 2019-20 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 800 ಕ್ವಿಂಟಾಲ್ ಅಧಿಕ ಇಳುವರಿ ನೀಡುವ ಭತ್ತದ ಬಿತ್ತನೆ ಬೀಜಗಳಾದ ತುಂಗಾ, ತನು, ಅತೀರ, ಹೈಬ್ರೀಡ್ ತಳಿಗಳಾದ ವಿಎನ್‍ಆರ್ 2233 ನೀಡಲಾಗಿದೆ.
ಮುಸುಕಿನ ಜೋಳದ ಬೆಳೆಯುವ ಗುರಿ 4ಸಾವಿರ ಹೆಕ್ಟೇರ್ ಗುರಿ ಇದ್ದು, 3050 ಹೆಕ್ಟೇರ್ ಬಿತ್ತನೆಯಾಗಿರುತ್ತದೆ. ಮುಸುಕಿನ ಜೋಳ ತಳಿಗಳಾದ ಗಂಗಾ ಕಾವೇರಿ, ಜಿ.ಕೆ 3164, ಸಿ.ಪಿ818, ಪೈನಿಯರ್ 30ಬಿ07, ಕಾವೇರಿ ಸೀಡ್ಸ್ ತಳಿಗಳನ್ನು ಸಹಾಯದನದಲ್ಲಿ ವಿತರಿಸಲಾಗಿದೆ. ಬೆಳೆ ಬೆಳವಣಿಗೆಯ ಹಂತದಲ್ಲಿದ್ದು, ಎಲೆ ಚುಕ್ಕಿ ರೋಗ, ಬೂದಿ ರೋಗ ಹಾಗೂ ಕೀಟ ಬಾಧೆ ಕಂಡು ಬಂದಲ್ಲಿ 10 ಗ್ರಾಂ ನೀರಿಗೆ 30 ಗ್ರಾಂ ಡೈಥೇನ್ ಎಂ45 ಹಾಗೂ 20 ಮಿ.ಲೀ ಕ್ಲೋರೋ ಫೈರಿಫಾಸ್ ಅಥವಾ ಹಾಮ್ಲ ಕೀಟನಾಶವನ್ನು ಮಿಶ್ರಣ ಮಾಡಿ ಸಿಂಪಡಿಸಬೇಕೆಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.