ಸೋಮವಾರಪೇಟೆ ತಾ.ಪಂ ಸಭೆ : ಕೋವಿಡ್ ಕುರಿತು ಚರ್ಚೆ

ಸೋಮವಾರಪೇಟೆ ಜು.18 : ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಕೋವಿಡ್ 19ರ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜನರಿಂದ ಸ್ವಾಬ್ ತೆಗೆದು 7 ದಿನಗಳ ನಂತರ ಅದರ ಫಲಿತಾಂಶ ನೀಡುತ್ತಿದ್ದಾರೆ. ಅಲ್ಲಿಯವರೆಗೆ ಸ್ವಾಬ್ ನೀಡಿದವರು ಎಲ್ಲೆಡೆ ಸಂಚರಿಸುತ್ತಿದ್ದು, ವೈರಸ್ ಹರಡುವುದು ಹೆಚ್ಚಾಗುತ್ತಿದೆ. ತಕ್ಷಣ ಫಲಿತಾಂಶ ನೀಡಲು ಹಾಗೂ ಸ್ವಾಬ್ ನೀಡಿದವರನ್ನು ಕ್ವಾರೆಂಟೆನ್‍ನಲ್ಲಿ ಇರಿಸಲು ಮುಂದಾಗಬೇಕು. ಸ್ವಾಬ್ ಫಲಿತಾಂಶ ಒಂದು ದಿನ ಪಾಸಿಟೀವ್ ಎಂದು ಮತ್ತೊಂದು ದಿನ ನೆಗೆಟೀವ್ ಎಂದು ನೀಡಿ ಕೋವಿಡ್ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತಿದೆ. ಪರಿಣಾಮಕಾರಿ ಫಲಿತಾಂಶ ನೀಡುವಂತೆ ಪಂಚಾಯಿತಿ ಸದಸ್ಯರು ಒತ್ತಾಯಿಸಿದ ಘಟನೆ ನಡೆಯಿತು.
ಈ ಸಂದರ್ಭ ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಈ ಹಿಂದೆ ಕಡಿಮೆ ಪ್ರಮಾಣದಲ್ಲಿ ಜನರಿಂದ ಸ್ವಾಬ್ ತೆಗೆದು ಜಿಲ್ಲಾ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು. ಆದರೆ, ಈಗ ದಿನಕ್ಕೆ ಸುಮಾರು ಸಾವಿರ ಜನರಿಂದ ಸ್ವಾಬ್ ತೆಗೆದು ಕಳುಹಿಸಲಾಗುತ್ತಿದೆ. ಇದರಿಂದಾಗಿ ಫಲಿತಾಂಶ ವಿಳಂಭವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಸ್ವಾಬ್ ಫಲಿತಾಂಶ ತಡವಾಗಿ ನೀಡಿರುವುದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಲ್ಲಿ ಪ್ರಶ್ನಿಸಿದರೆ, ಉಡಾಫೆಯ ಉತ್ತರ ನೀಡುತ್ತಾರೆ ಎಂದು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ದೂರಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ನಿಷೇಧ ಮಾಡಲಾಗಿತ್ತು. ಮತ್ತೆ ಜಿಲ್ಲಾಡಳಿತ ತೆರವುಗೊಳಿಸಿದ್ದರಿಂದ ಕರೊನಾ ವೈರಸ್ ಹರಡುವುದು ಹೆಚ್ಚಾಗಲು ಕಾರಣವಾಯಿತು. ಕಂಟೈನ್‍ಮೆಂಟ್ ಝೋನ್‍ನಲ್ಲಿ ಎಲ್ಲರೂ ಸ್ವತಂತ್ರವಾಗಿ ಸಂಚರಿಸುತ್ತಿದ್ದಾರೆ. ಕಂಟೈನ್‍ಮೆಂಟ್ ಮಾಡುವ ಅವಶ್ಯಕತೆ ಇದೆಯೇ ಎಂದು ಸದಸ್ಯರು ಪ್ರಶ್ನಿಸಿದರು.
ಸೋಮವಾರ ಪಟ್ಟಣದಲ್ಲಿ ಸಂತೆ ರದ್ದುಗೊಳಿಸಿದರೂ, ಎಂದಿಗಿಂತ ಹೆಚ್ಚಿನ ವಾಹನಗಳು ಜನರು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಎಲ್ಲೆಂದರಲ್ಲಿ ತರಕಾರಿ ಅಂಗಡಿಗಳನ್ನು ಹಾಕಿ ವ್ಯಾಪಾರ ಮಾಡುತ್ತಿದ್ದಾರೆ. ಸಂತೆ ತಡೆಯಲು ಪಟ್ಟಣ ಪಂಚಾಯಿತಿ ಹಾಗೂ ವಾಹನಗಳ ದಟ್ಟಣೆ ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದ್ದು, ಮುಂದಿನ ಸಂತೆಯ ದಿನದಂದು ಜಿಲ್ಲಾಧಿಕಾರಿಗಳೊಂದಿಗೆ ಮನವಿ ಮಾಡಿ ಎರಡು ದಿನ 144 ಸೆಕ್ಷನ್ ಜಾರಿಗೆ ತರುವ ಮೂಲಕ ಜನರನ್ನು ನಿಯಂತ್ರಿಸಬೇಕೆಂದು ಉಪಾಧ್ಯಕ್ಷರು ಹೇಳಿದರು.
ಇಲ್ಲಿನ ಹೋಮಿಯೋಪತಿ ಆಸ್ಪತ್ರೆ ಬಳಿ ಇರುವ ಶವಾಗಾರದ ಸುತ್ತ ಅನೈರ್ಮಲ್ಯ ತುಂಬಿದ್ದು, ಕೆಲವೊಮ್ಮೆ ಸ್ಥಳವನ್ನು ಮೃತದೇಹವನ್ನು ಪಡೆಯುವವರು ಅಥವಾ ಪೊಲೀಸರು ಸ್ವಚ್ಛಗೊಳಿಸುವಂತಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎನ್. ತಂಗಮ್ಮ ದೂರಿದರು. ಚೆಟ್ಟಳ್ಳಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಉಳ್ಳವರ ಪಾಲಾಗಿದೆ. ಪರಿಶೀಲಿಸಿ ರದ್ಧುಗೊಳಿಸುವಂತೆ ಆಹಾರ ಇಲಾಖೆಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣ ಪ್ರದೇಶದ ಮದ್ಯದಲ್ಲಿ ಜನರಿಗೆ ಹಂದಿ ಸಾಕಾಣಿಕೆಗೆ ಅವಕಾಶ ನೀಡಬಾರದು ಎಂದು ಸದಸ್ಯ ಮಣಿಉತ್ತಪ್ಪ ಒತ್ತಾಯಿಸಿದರು.
ಹಿಂದಿನ ಮುಂಗಾರು ಅವಧಿಯಲ್ಲಿ ನೆಲ್ಯಹುದಿಕೇರಿ ಗ್ರಾಮದ ಕಾವೇರಿ ನದಿದಂಡೆಯ ಮೇಲೆ ಮನೆ ನಿರ್ಮಿಸಿಕೊಂಡಿರುವವರಿಗೆ ಬೇರೆಡೆ ನಿವೇಶನ ನೀಡಿ ಅಲ್ಲಿಂದ ತೆರವುಗೊಳಿಸಲು ಮನವಿ ಮಾಡಲಾಗಿತ್ತು. ಅದರೆ, ಮತ್ತೆ ಮಳೆಗಾಲ ಬಂದರೂ, ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸಿ ಅಲ್ಲಿಂದ ತೆರವುಗೊಳಿಸಿಲ್ಲ. ಮಳೆ ಹೆಚ್ಚಾದಲ್ಲಿ ಪುನಃ ಅವರು ತೊಂದರೆಗೆ ಸಿಲುಕಲಿದ್ದಾರೆ ಎಂದು ಸದಸ್ಯ ಎಂ.ಕೆ. ಚಂಗಪ್ಪ ದೂರಿದರು. ಕೆಲವರಿಗೆ ಮನೆ ನೀಡಿದರೂ, ಅದನ್ನು ಬೇರೆಯವರಿಗೆ ಬಾಡಿಗೆ ನೀಡಿ ಹೊಳೆದಂಡೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಮಣಿಉತ್ತಪ್ಪ ಹೇಳಿದರು. ಹೊಳೆದಂಡೆಯಲ್ಲಿ ಮನೆ ನಿರ್ಮಿಸಿಕೊಂಡಿರುವವರನ್ನು ಬದಲಿ ವ್ಯವಸ್ಥೆ ಕಲ್ಪಿಸಿ ತೆರವುಗೊಳಿಸಬೇಕು. ತಪ್ಪಿದಲ್ಲಿ ಅವರಿಗೆ ಯಾವುದೇ ತೊಂದರೆಯಾದಲ್ಲಿ ಜಿಲ್ಲಾಡಳಿತ ಹಾಗೂ ಅಲ್ಲಿನ ನಿವಾಸಿಗಳೇ ನೇರ ಹೊಣೆಗಾರರಾಗಿರುತ್ತಾರೆ. ಅಂತಹವರಿಗೆ ಸರಕಾರದÀ ಯಾವುದೇ ಸವಲತ್ತುಗಳನ್ನು ನೀಡದಂತೆ ಮನವಿ ಮಾಡಲು ಸಭೆ ನಿರ್ಣಯ ಕೈಗೊಂಡಿತು.
ಪಟ್ಟಣ ಪಂಚಾಯಿತಿಯಿಂದ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಿಸದ ಬಗ್ಗೆ ಸದಸ್ಯ ಸತೀಶ್ ಪ್ರಶ್ನಿಸಿದರು. ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ್‍ಕುಮಾರ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.