ಕೊಡಗಿನ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ನಡೆಯಲಿದೆ

18/07/2020

ಮಡಿಕೇರಿ ಜು.18 : ಜಿಲ್ಲೆಯ ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಎಸ್.ಎಚ್.ಮಹೇಶ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟವರಿಗೆ ಸರ್ಕಾರದ ನಿಯಮಾನುಸಾರ ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಕೋವಿಡ್-19 ಸಂಬಂಧ ಸಾರ್ವಜನಿಕರಲ್ಲಿರುವ ಕೆಲವು ಗೊಂದಲಗಳನ್ನು ನಿವಾರಿಸುವ ಸಲುವಾಗಿ ಮಾಹಿತಿ ನೀಡಿ ಅವರು ಮಾತನಾಡಿದರು.
ಶೀತ, ಕೆಮ್ಮು, ಜ್ವರದ ರೋಗ ಲಕ್ಷಣಗಳಿರುತ್ತವೆಯೋ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಜೊತೆಗೆ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಮತ್ತು ವಿದೇಶದಿಂದ ಆಗಮಿಸುವವರಿಗೆ ನಿಯಮದಂತೆ ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತದೆ ಎಂದು ಡಾ.ಮಹೇಶ್ ಅವರು ವಿವರಿಸಿದರು.
ಕೊರೊನಾ ವೈರಸ್ ಪತ್ತೆಗಾಗಿ 2 ರೀತಿಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆರ್‍ಟಿಪಿಸಿಆರ್ ಮತ್ತು ರ್ಯಾಪಿಟ್ ಆಂಟಿಜನ್ ಕಿಟ್ ಮುಖಾಂತರ ಕೊರೊನಾ ವೈರಸ್‍ನ್ನು ಪತ್ತೆ ಹಚ್ಚಲಾಗುತ್ತದೆ. ಆರ್‍ಟಿಪಿಸಿಆರ್ ವಿಧಾನದ ಮೂಲಕ ವ್ಯಕ್ತಿಯ ಮೂಗು ಅಥವಾ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಐಸಿಎಂಆರ್‍ನಿಂದ ಅಂಗೀಕೃತ ಪ್ರಯೋಗಾಲಯದಲ್ಲಿ ಈ ದ್ರವದ ಪರೀಕ್ಷೆ ನಡೆಸಲಾಗುತ್ತದೆ ಎಂದರು.
ರ್ಯಾಪಿಡ್ ಆಂಟಿಜನ್ ಕಿಟ್ ಬಳಸಿ ಸಾಮಾನ್ಯವಾಗಿ ಎಲ್ಲಾ ವ್ಯಕ್ತಿಗಳಿಗೂ ಸಹ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಈ ಪರೀಕ್ಷೆ ವಿಧಾನವನ್ನು ಕೋವಿಡ್-19 ಶಂಕಿತ ವ್ಯಕ್ತಿಯ ಮರಣ ಸಂದರ್ಭದಲ್ಲಿ ಪರೀಕ್ಷಿಸಲಾಗುವುದು ಎಂದು ಡಾ.ಮಹೇಶ್ ಅವರು ತಿಳಿಸಿದರು.
ಇನ್ನು ಆರ್‍ಟಿಪಿಸಿಆರ್ ಮುಖಾಂತರ ವ್ಯಕ್ತಿಯೊಬ್ಬನ ಗಂಟಲು/ ಮೂಗು ದ್ರವವನ್ನು ಸಂಗ್ರಹಿಸಿ 48 ಗಂಟೆಯೊಳಗೆ ಕೋವಿಡ್-19 ಪರೀಕ್ಷೆಯ ಫಲಿತಾಂಶ ದೊರೆಯಲಿದೆ. ರ್ಯಾಪಿಡ್ ಆಂಟಿಜನ್ ಕಿಟ್ ಮುಖಾಂತರ ಶೀಘ್ರವೇ ಕೋವಿಡ್-19 ಸಂಬಂಧ ಫಲಿತಾಂಶ ದೊರೆಯಲಿದೆ ಎಂದರು.
ಪಾಸಿಟಿವ್ ಅಥವಾ ನೆಗೆಟಿವ್ ಬಂದಂತಹ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಜಿಲ್ಲಾಡಳಿತ ಮುಖಾಂತರ ಮಾಹಿತಿ ನೀಡಲಾಗುತ್ತಿದೆ. ನೆಗೆಟಿವ್ ವರದಿ ಬಂದವರ ಮಾಹಿತಿಯನ್ನು ಜಿಲ್ಲಾಡಳಿತದ ತಿತಿತಿ.ಞoಜಚಿgu.ಟಿiಛಿ.iಟಿ ಮುಖಾಂತರ ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಪ್ರತಿ ದಿನವೂ ಸಹ ವರದಿ ನೀಡಲಾಗುತ್ತದೆ ಎಂದರು.
ಪಾಸಿಟಿವ್ ವರದಿ ಬಂದಂತಹ ಪ್ರಕರಣಗಳನ್ನು ಗೌಪ್ಯವಾಗಿಡಲಾಗುತ್ತದೆ. ಪಾಸಿಟಿವ್ ವರದಿ ಬಂದಂತಹ ಸಂದರ್ಭದಲ್ಲಿ ದೂರವಾಣಿ ಮೂಲಕ ತಿಳಿಸಿ, ಅವರಿಗೆ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗುತ್ತದೆ. ಮೊದಲಿಗೆ ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ಈ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ ಆ ಮಾಹಿತಿಯನ್ನು ತಹಶೀಲ್ದಾರರಿಗೆ, ತಾಲೂಕು ವೈದ್ಯಾಧಿಕಾರಿ ಮತ್ತು ತಂಡಕ್ಕೆ ನೀಡಲಾಗುತ್ತದೆ. ನಂತರ ತಹಶೀಲ್ದಾರರು ಸೋಂಕಿತ ವ್ಯಕ್ತಿಯು ವಾಸವಿದ್ದ ಸ್ಥಳ ಸುತ್ತಲಿನ ಪ್ರದೇಶದಲ್ಲಿ ಕಂಟೈನ್‍ಮೆಂಟ್ ವಲಯ ತೆರೆಯಲಾಗುತ್ತದೆ. ಅಲ್ಲದೆ ಸೋಂಕು ದೃಢಪಟ್ಟ ವ್ಯಕ್ತಿಯ ಹಿಂದಿನ 14 ದಿನಗಳ ರೂಟ್‍ಮ್ಯಾಪ್ ಸಿದ್ಧಪಡಿಸಲಾಗುತ್ತದೆ. ಈ ಪೈಕಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಪ್ರತೀ ತಾಲೂಕಿನಲ್ಲಿ 2-3 ತಂಡ ರಚನೆ ಮಾಡಲಾಗಿದೆ. ತಂಡ ವ್ಯಕ್ತಿಯ ಮನೆಯನ್ನು ಪರಿಶೀಲಿಸಿ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಲಿದ್ದಾರೆ. ಮನೆಯಲ್ಲಿ ಪ್ರತ್ಯೇಕ ಕೋಣೆಯ ವ್ಯವಸ್ಥೆ, ಹೆಚ್ಚಿನ ಜನಸಂದಣಿ ಇಲ್ಲದಿರುವುದು ಮತ್ತು ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆಯಿದ್ದರೆ ಮಾತ್ರವೇ ಅಂತಹ ಮನೆಯಲ್ಲಿ ಸೋಂಕಿತ ವ್ಯಕ್ತಿಯನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಮಡಿಕೇರಿ, ವೀರಾಜಪೇಟೆ ಮತ್ತು ಕುಶಾಲನಗರದಲ್ಲಿ ಕೋವಿಡ್ ಕೇರ್ ಸೆಂಟರ್‍ಗಳಿವೆ. ಕೋವಿಡ್ ಸೆಂಟರ್‍ನಲ್ಲಿ ಇಸಿಜಿ, ಸಿಬಿಸಿ ಮತ್ತು ಮಧುಮೇಹ ಪರೀಕ್ಷೆ ನಡೆಸಿ ಬಳಿಕ ಆರೋಗ್ಯ ಸ್ಥಿರವಾಗಿದ್ದರೆ. ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದರು.
ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ದಾಖಲಾದ ಬಳಿಕ ಆತನ ಮೂಗು/ ಗಂಟಲು ದ್ರವ ಮಾದರಿಯನ್ನು ತೆಗೆದ 10 ದಿನಗಳ ಬಳಿಕ ಕೊರೊನಾ ವೈರಸ್ ಸಂಬಂಧಿತ ಯಾವುದೇ ರೋಗ ಲಕ್ಷಣಗಳಿಲ್ಲ ಎಂದಾದಲ್ಲಿ ಆ ವ್ಯಕಿಯ ಕೈಗೆ ಸೀಲ್ ಮಾಡಿ ಕಡ್ಡಾಯ ಗೃಹ ಸಂಪರ್ಕ ತಡೆಯಲ್ಲಿರುವಂತೆ ಸೂಚಿಸಲಾಗುತ್ತದೆ. ಹೋಂ ಐಸೋಲೇಷನ್‍ನಲ್ಲಿ ಇರುವವರನ್ನು 17 ದಿನಗಳ ಬಳಿಕ ಹೋಂ ಐಸೋಲೇಷನ್‍ನಿಂದ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ವಿದೇಶಗಳಿಗೆ ಅತೀ ತುರ್ತಾಗಿ ಹೋಗಬೇಕಿರುವವರು ಕೋವಿಡ್ ಪರೀಕ್ಷೆಗೆ ಒಳಪಡಲು ಇಚ್ಛಿಸಿದಲ್ಲಿ ತಕ್ಷಣವೇ ಪರೀಕ್ಷಾ ಮಾಹಿತಿ ಬೇಕಿದ್ದಲ್ಲಿ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮಹೇಶ್ ಅವರು ತಿಳಿಸಿದ್ದಾರೆ.