ಕೊಡಗಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ : ಜಿಲ್ಲಾಡಳಿತದೊಂದಿಗೆ ಸಹಕರಿಸಲು ಜಿಲ್ಲಾಧಿಕಾರಿ ಮನವಿ

18/07/2020

ಮಡಿಕೇರಿ ಜು.18 : ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಹಗಲು ರಾತ್ರಿ ಶ್ರಮ ವಹಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯೊಂದಿಗೆ ಯಾವುದೇ ಆತಂಕ ಪಡದಂತೆ ಅಭಯ ನೀಡಿದರು.
ಕೋವಿಡ್-19 ನಿಯಂತ್ರಿಸಲು ಲಾಕ್‍ಡೌನ್ ಒಂದೇ ಶಾಶ್ವತ ಪರಿಹಾರವಲ್ಲ. ಆದ್ದರಿಂದ ಪ್ರತಿಯೊಬ್ಬರೂ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು. ಜೊತೆಗೆ ಅಂತರ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿದ್ದರೂ ಸಹ ಜಿಲ್ಲೆಯಲ್ಲಿ ಏಕೆ ಲಾಕ್‍ಡೌನ್ ಮಾಡುತ್ತಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಆದರೆ ಲಾಕ್‍ಡೌನ್ ಶಾಶ್ವತ ಪರಿಹಾರವಲ್ಲ. ಕೊಡಗು ಜಿಲ್ಲೆಗೂ ಬೇರೆ ಜಿಲ್ಲೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಖಾಸಗಿ ಆಸ್ಪತ್ರೆಗಿಂತಲೂ ಸರ್ಕಾರಿ ವೈದ್ಯಕೀಯ ಕೇಂದ್ರಗಳನ್ನೇ ಜಿಲ್ಲೆ ಅವಲಂಬಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 250 ಹಾಸಿಗೆ ಸಾಮಥ್ರ್ಯದ 1 ಕೋವಿಡ್ ಜಿಲ್ಲಾಸ್ಪತ್ರೆ ಇದೆ. ಇದರಲ್ಲಿ 31 ಐಸಿಯು ಬೆಡ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ 25 ವೆಂಟಿಲೇಟರ್‍ಗಳನ್ನು ಸಹ ಸಿದ್ದಪಡಿಸಲಾಗಿದೆ. ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಮತ್ತು ಕುಶಾಲನಗರದಲ್ಲಿ ವ್ಯವಸ್ಥಿತವಾಗಿ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದೆ. ಒಟ್ಟಾರೆ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ 2 ಸಾವಿರ ಹಾಸಿಗೆ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕೋವಿಡ್-19 ವಿರುದ್ಧದ ಹೋರಾಟ ಮ್ಯಾರಥಾನ್ ಇದ್ದಂತೆ. ಸ್ಪಲ್ಪ ಓಡಿದ ಕೂಡಲೇ ನಾವೇ ಗೆದ್ದೆವು ಎಂದು ಹೇಳಿಕೊಳ್ಳುವಂತಿಲ್ಲ. ಹೀಗಿರುವಾಗ ವ್ಯಾಪಾರ ವಹಿವಾಟನ್ನೂ ಹೆಚ್ಚು ದಿನ ಬಂದ್ ಮಾಡಲು ಸಾಧ್ಯವಿಲ್ಲ. ಸಾಕಷ್ಟು ಮಂದಿಗೆ ಸೋಂಕಿನ ಲಕ್ಷಣವಿರುವುದೇ ಇಲ್ಲ. ಕೋವಿಡ್‍ನಿಂದಾಗಿ ಬಹುತೇಕರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಯೇ ಉಂಟಾಗಿಲ್ಲ. ಆದರೆ, ಸೋಂಕಿತರನ್ನು ಗ್ರಾಮಸ್ಥರು ಸಂಶಯದಿಂದ ನೋಡುವಂತಾಗಿದೆ. ಇದರಿಂದಾಗಿ ಸೋಂಕಿತರು ಮುಜಗರಕ್ಕೀಡಾಗುತ್ತಿದ್ದಾರೆ. ಆದ್ದರಿಂದ ನಾವು ಕೋವಿಡ್-19 ವಿರುದ್ಧ ಹೋರಾಡಬೇಕು. ಕೋವಿಡ್ -19 ಸೋಂಕಿತ ವ್ಯಕ್ತಿಯೊಂದಿಗೆ ಅಲ್ಲ ಎಂದು ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.
ನಿಯಮಾವಳಿಯಂತೆ ಹೊರ ದೇಶಗಳಿಂದ ಬರುವವರು 7 ದಿನ ಸಾಂಸ್ಥಿಕ ಸಂಪರ್ಕ ತಡೆ ಮತ್ತು 7 ದಿನ ಕಡ್ಡಾಯ ಗೃಹ ಸಂಪರ್ಕ ತಡೆಯಲ್ಲಿರಬೇಕು. ಹೊರ ರಾಜ್ಯಗಳಿಂದ ಆಗಮಿಸುವವರು 14 ದಿನಗಳ ಕಡ್ಡಾಯ ಗೃಹ ಸಂಪರ್ಕ ತಡೆಯಲ್ಲಿರಬೇಕು. ಹೊರ ಜಿಲ್ಲೆಗಳಿಂದ ಆಗಮಿಸುವವರೂ ಸಹ 7 ದಿನಗಳ ಗೃಹ ಸಂಪರ್ಕ ತಡೆಯಲ್ಲಿರಬೇಕು ಎಂದು ಅವರು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಸೌಲಭ್ಯಗಳಿಲ್ಲ ಎಂಬ ಮಾಹಿತಿ ಸುಳ್ಳು. ಎಲ್ಲಾ ಸೌಕರ್ಯಗಳೂ ಸುಸಜ್ಜಿತವಾಗಿದೆ. ಜಿಲ್ಲೆಯ ವೈದ್ಯರು ಸೋಂಕಿತ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಿ ಮಗುವಿನ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ ಎಂಬ ಅಂಶವನ್ನು ಜಿಲ್ಲಾಧಿಕಾರಿ ಅವರು ಸಾರ್ವಜನಿಕರ ಗಮನಕ್ಕೆ ತಂದರು.
ಸೌಲಭ್ಯಗಳಿಲ್ಲ ಎಂದು ಹೇಳದಿರಿ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಅತ್ಯುತ್ತಮ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೊಡಗಿಗೆ ಸರ್ಕಾರ ಎಲ್ಲಾ ರೀತಿಯ ಮೂಲಸೌಲಭ್ಯಗಳನ್ನು ನೀಡಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ವೈದ್ಯರ ಕೊರತೆಯಿದೆ. ವಾಕ್ ಇನ್ ನೇರ ಸಂದರ್ಶನಕ್ಕೆ ಕೂಡ ಮೆಡಿಕಲ್ ಕಾಲೇಜಿನಲ್ಲಿ ಕರೆ ನೀಡಿದ್ದೇವೆ. ಹೀಗಿದ್ದರೂ ವೈದ್ಯರು ನೇಮಕಾತಿಗೆ ಬರುತ್ತಿಲ್ಲ. ತಿಂಗಳಿಗೆ 60 ಸಾವಿರ ಸಂಬಳ ನೀಡಿದರೂ ವೈದ್ಯರೂ ಬರುತ್ತಿಲ್ಲ. ಕೊಡಗಿನ ಮೂಲದ ವೈದ್ಯರು ಬೇರೆ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ತವರಿಗೆ ಆಗಮಿಸಿ ಕಾರ್ಯ ನಿರ್ವಹಿಸಬೇಕು. ತವರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಇದೊಂದು ಉತ್ತಮ ಅವಕಾಶ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಣಣಿ ಜಾಯ್ ಅವರು ಕಳಕಳಿಯಿಂದ ಮನವಿ ಮಾಡಿದರು.
ಜಿಲ್ಲೆಯಲ್ಲಿ ಕೊರೊನಾ ಸಂಬಂಧಿತ ಸುಳ್ಳು ಮಾಹಿತಿ ಹಬ್ಬಿಸಲಾಗುತ್ತಿದೆ. ಸುಳ್ಳು ಮಾಹಿತಿಯಿಂದ ಜನರು ಆತಂಕಕ್ಕೀಡಾಗುತ್ತಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಬ್ಲಾಕ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೂ ಸುಳ್ಳು ಮಾಹಿತಿ ನೀಡಿ ಗೊಂದಲ ನಿರ್ಮಾಣ ಮಾಡುವುದು ಬೇಡ ಎಂದು ಜಿಲ್ಲಾಧಿಕಾರಿ ಅವರು ಕೋರಿದರು.
ಕಳೆದ ಫೆಬ್ರವರಿಯಿಂದಲೇ ಜಿಲ್ಲೆಯ ಅಧಿಕಾರಿಗಳು ವಿರಾಮವಿಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ಸುಳ್ಳು ಮಾಹಿತಿ ಹರಡುವ ಮೂಲಕ ಅಧಿಕಾರಿ, ಸಿಬ್ಬಂದಿಗಳ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡಬಾರದು. ಯಾವುದೇ ಸಮಸ್ಯೆಯಿದ್ದರೂ ಜಿಲ್ಲಾಧಿಕಾರಿ ಅವರ ಕಚೇರಿಯ ಕಂಟ್ರೋಲ್ ರೂಮ್ ಸಂಖ್ಯೆ 1077 ಗೆ ವಿಚಾರ ತಿಳಿಸಿ. ಈ ಕಂಟ್ರೋಲ್ ರೂಂ ವಾರದ 7 ದಿನ 24 ಗಂಟಗಳ ಕಾಲ ಕಾರ್ಯನಿರ್ವಹಿಸಲಿದೆ. ಸಮಸ್ಯೆಯ ಪ್ರಕರಣವಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುವುದಕ್ಕಿಂತ ಮುಂಚೆ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿ ಕೋರಿದರು.
ಕಂಟೈನ್ಮೆಂಟ್ ವಲಯಗಳಲ್ಲಿ ಸಮಸ್ಯೆ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಮನೆಯಲ್ಲಿ ಅಗತ್ಯ ರೇಷನ್ ಸಂಗ್ರಹಿಸಿಟ್ಟುಕೊಳ್ಳಿ. ಕೊರೊನಾ ಸಮಸ್ಯೆಯ ದಿನಗಳು ಸಾಗುವ ಮಾರ್ಗ ಬಹಳ ದೂರವಿದೆ. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಎದುರಿಸೋಣ ಎಂದರು.
ಪ್ರಯೋಗಾಲಯಗಳಲ್ಲಿ ಶೀಘ್ರವೇ ಗಂಟಲು, ಮೂಗಿನ ಮಾದರಿಯ ಪರೀಕ್ಷಾ ವರದಿ ನೀಡಲು ಕ್ರಮಕೈಗೊಳ್ಳಲಾಗಿದೆ ಪ್ರಯೋಗಾಲಯದಲ್ಲಿ ಯಂತ್ರದ ದುರಸ್ತಿಯಿಂದಾಗಿ ಕೆಲವು ದಿನ ಸಮಸ್ಯೆಯಾಗಿತ್ತು. ಈಗ ಪ್ರಯೋಗಾಲಯದ ಸಮಸ್ಯೆಗಳೆಲ್ಲಾ ಪರಿಹಾರವಾಗಿದೆ. ಮುಂದಿನ ದಿನಗಳಲ್ಲಿ ವಿಳಂಬವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ರ್ಯಾಂಡಮ್ ಆಗಿ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಗುತ್ತದೆ. ಆಶಾ ಕಾರ್ಯಕರ್ತೆಯರು, ಚಾಲಕರು, ಬ್ಯಾಂಕ್ ಸಿಬ್ಬಂದಿಗಳು, ಪೆÇಲೀಸರಿಗೆ ರ್ಯಾಂಡಮ್ ತಪಾಸಣೆ ಮಾಡಲಾಗುತ್ತದೆ. ಪ್ರತಿ ತಾಲೂಕಿಲ್ಲಿ ಎರಡು ಮೊಬೈಲ್ ಯೂನಿಟ್‍ಗಳು ತಾಲೂಕುಗಳಲ್ಲಿ ಮನೆ ಮನೆಗೆ ಹೋಗಿ ಮಾದರಿ ಸಂಗ್ರಹಿಸಲಾಗುತ್ತಿದೆ. ಪ್ರವಾಸದ ದಿನಗಳನ್ನು ಹೊರತುಪಡಿಸಿ ಪ್ರತೀ ಮಂಗಳವಾರ ಮತ್ತು ಶುಕ್ರವಾರಗಳಂದು ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಕುಂದು ಕೊರತೆ ಪರಿಹರಿಸಿಕೊಳ್ಳಬಹುದಾಗಿದೆ. ಪೆÇಲೀಸರು, ಆಶಾ ಕಾರ್ಯಕರ್ತರು ಸೇರಿದಂತೆ ಕೊರೊನಾ ವಾರಿಯರ್ಸ್‍ಗಳಿಗೆ ಮಾಸ್ಕ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ. ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಫೇಸ್‍ಬುಕ್‍ನಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾಹಿತಿ ನೀಡಿದರು.
ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ಮತ್ತು ಪ್ರತೀ ವ್ಯಕ್ತಿಗೂ ಪ್ರತ್ಯೇಕ ಶೌಚಾಲಯ ನೀಡುವುದು ಕಷ್ಟಸಾಧ್ಯ. ಕರಿಕೆ ಗ್ರಾಮದ ಜನರಿಗೆ ಅಗತ್ಯವಿದ್ದಲ್ಲಿ ಭಾಗಮಂಡಲದಲ್ಲಿನ ಅಂಬ್ಯುಲೆನ್ಸ್ ಬಳಸಲು ಸಿದ್ದಪಡಿಸಲಾಗಿದೆ. ಜಿಲ್ಲೆಯ ಪ್ರತೀ ಗ್ರಾಮಮಟ್ಟದಲ್ಲಿ, ವಾರ್ಡ್ ಮಟ್ಟದಲ್ಲಿ ಸಮಿತಿ ರಚಿಸಲಾಗುತ್ತಿದೆ. ಅವರ ಮೂಲಕ ಹೊರ ಜಿಲ್ಲೆಯಿಂದ ಬಂದವರನ್ನು ಪತ್ತೆ ಹಚ್ಚಿ ಅಗತ್ಯ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಲಾಡ್ಜ್‍ಗಳನ್ನು ಸೋಂಕಿತರ ದಾಖಲಾತಿಗೆ ಗುರುತಿಸಲಾಗಿದೆಯೇ ಹೊರತು ಹೋಂ ಸ್ಟೇಗಳನ್ನು ಗುರುತಿಸಲಾಗಿಲ್ಲ. ಮನೆಗಳಲಿಯೇ ಹೋಂ ಸ್ಟೇಗಳಿರುವುದರಿಂದ ಅಲ್ಲಿ ಸೋಂಕಿತರ ದಾಖಲಾತಿ ಸಾಧ್ಯವಿಲ್ಲ. ಜಿಲ್ಲೆಯ ಗಡಿಯಲ್ಲಿ ಚೆಕ್ ಪೆÇೀಸ್ಟ್ ನಲ್ಲಿ ಆರೋಗ್ಯ ತಪಾಸಣೆ ಮಾಡುವುದು ತಾಂತ್ರಿಕ ಕಾರಣಗಳಿಂದ ಕಷ್ಟಸಾಧ್ಯ ಎಂದರು.
ಮೆಡಿಕಲ್ ಕಾಲೇಜಿಗೆ ಕೋವಿಡ್ ಆಸ್ಪತ್ರೆಯನ್ನು ಸ್ಥಳಾಂತರಿಸಲಾಗುವುದಿಲ್ಲ. ಮೆಡಿಕಲ್ ಕಾಲೇಜು ಶಿಕ್ಷಣ ಸಂಸ್ಥೆಯಾಗಿದೆ. ವೆಂಟಿಲೇಟರ್, ಆಕ್ಸಿಜನ್ ಪೈಪ್ ಸೇರಿದಂತೆ ಕೋವಿಡ್ ಆಸ್ಪತ್ರೆಯಲ್ಲಿ ಯಾವೆಲ್ಲಾ ಆರೋಗ್ಯ ಸುರಕ್ಷತಾ ಸೌಲಭ್ಯ ಬೇಕೋ ಅವೆಲ್ಲವೂ ಇದೆ. ಇವುಗಳೆಲ್ಲವನ್ನೂ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲು ಸಾಧ್ಯವಿಲ್ಲ ಆಸ್ಪತ್ರೆಯೇ ಬೇರೆ, ಮೆಡಿಕಲ್ ಕಾಲೇಜೆ ಬೇರೆಯಾಗಿದೆ. ಕೋವಿಡ್ ಆಸ್ಪತ್ರೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ. ಎಲ್ಲರ ಮಾರ್ಗದರ್ಶನ ಪಾಲಿಸಿಕೊಂಡು ಕೊಡಗಿನಲ್ಲಿ ಕೊವಿಡ್ ಆಸ್ಪತ್ರೆಯನ್ನು ನಿರ್ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸೋಂಕಿತರ ಪ್ರಾಥಮಿಕ ಮತ್ತು ಇತರ ಸಂಪರ್ಕವನ್ನು ಜಿಲ್ಲೆಯಲ್ಲಿ ವಿಳಂಬವಿಲ್ಲದಂತೆ ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೊರೊನಾ ಸೋಂಕಿತರಿಗೆ ಈಗಾಗಲೇ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಗೆ ನೀಡುವ ಆಹಾರ, ಔಷಧಿ ಮುಂತಾದ ಸೌಕರ್ಯಗಳಿಗೂ ಸಂಪೂರ್ಣ ಉಚಿತವಾಗಿದೆ. ಮಾದಾಪುರ ಭಾಗಕ್ಕೂ ಸಹ ಆಂಬುಲೆನ್ಸ್ ವ್ಯವಸ್ಥೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಮಳೆಗಾಲವನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಜೂನ್ ಮೊದಲ ವಾರದಿಂದಲೇ ಎನ್‍ಡಿಆರ್‍ಎಫ್ ತಂಡ ಜಿಲ್ಲೆಯಲ್ಲಿದೆ. ಇದಲ್ಲದೆ ಪೊಲೀಸ್, ಹೋಂಗಾಡ್ರ್ಸ್ ಮತ್ತು ಅಗ್ನಿಶಾಮಕ ಇಲಾಖೆ ಸೇರಿದಂತೆ 4 ರೆಸ್ಕ್ಯೂ ತಂಡಗಳೂ ಸಹ ಜಿಲ್ಲೆಯಲ್ಲಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು.
ಫೇಸ್‍ಬುಕ್ ಲೈವ್‍ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮೋಹನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಕಾರ್ಯಪ್ಪ, ಸಮುದಾಯ ಆರೋಗ್ಯ ವಿಭಾಗದ ಡಾ.ಮಹೇಶ್ ಇತರರು ಹಾಜರಿದ್ದರು.