ಕೊರೋನಾ ಲಾಕ್ ಡೌನ್ : ಕೊಡಗು ಸ್ತಬ್ಧ

18/07/2020

ಮಡಿಕೇರಿ ಜು.18 : ಕೊರೊನಾ ಸಾಂಕ್ರಾಮಿಕ ತಡೆಯ ಹಿನ್ನೆಲೆಯಲ್ಲಿ ವಾರಾಂತ್ಯದ ಎರಡು ದಿನಗಳ ‘ಲಾಕ್ ಡೌನ್’ಗೆ ಕೊಡಗು ಪೂರಕವಾಗಿ ಸ್ಪಂದಿಸಿದ್ದು, ಶನಿವಾರ ವ್ಯಾಪಾರ ವಹಿವಟುಗಳು ಸ್ಥಗಿತಗೊಳ್ಳುವ ಮೂಲಕ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು.
ಜಿಲ್ಲಾ ಕೇಂದ್ರ ಮಡಿಕೇರಿ, ತಾಲ್ಲೂಕು ಕೇಂದ್ರಗಳಾದ ಸೋಮವಾರಪೇಟೆ, ವೀರಾಜಪೇಟೆ, ವಾಣಿಜ್ಯಕ ನಗರಿ ಕುಶಾಲನಗರ ಸೇರಿದಂತೆ ಜಿಲ್ಲೆಯ ಬಹುತೇಕ ಪಟ್ಟಣ ಪ್ರದೇಶಗಳಲ್ಲಿ ವ್ಯಾಪಾರ, ವಹಿವಾಟು, ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಲಾಕ್‍ಡೌನ್ ವೇಳೆ ಜಿಲ್ಲೆಯ ಜನತೆ ಮನೆಯಿಂದ ಹೊರಕ್ಕಿಳಿಯದೆ ತಮ್ಮ ಪೂರ್ಣ ಸಹಕಾರವನ್ನು ನೀಡಿದ್ದರು.
ಲಾಕ್ ಡೌನ್ ನಿಯಮದಂತೆ ಮಡಿಕೇರಿ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಹಾಲು, ದಿನಪತ್ರಿಕೆಗಳ ವಿತರಣೆಗೆ ಅವಕಾಶ ದೊರಕಿತ್ತು. ಬಳಿಕ ದಿನಪೂರ್ತಿ ಔಷಧಿಯಂಗಡಿಗಳು ಮತ್ತು ಆಸ್ಪತ್ರೆಗಳನ್ನು ಹೊರತು ಪಡಿಸಿದಂತೆ ಮತ್ತಾವುದೇ ಅಂಗಡಿ ಮಳಿಗೆಗಳು ತೆರೆದಿರಲಿಲ್ಲ.
ಮಡಿಕೇರಿಯಲ್ಲಿ ಬೆಳಗ್ಗಿನ ಅವಧಿಯಲ್ಲಿ ಖಾಸಗಿ ಬಸ್ ನಿಲ್ದಾಣದ ಡೈರಿ, ನಂತರ ಇಡೀ ದಿನ ಔಷಧಿಯಂಗಡಿಗಳು ತೆರೆದಿದ್ದವಾದರು, ಬೆರಳೆಣಿಕೆಯ ಜನ ಮತ್ತು ವಾಹನ ಸಂಚಾರಷ್ಟೆ ಕಂಡು ಬಂದಿತು. ನಗರದ ಮುಖ್ಯ ರಸ್ತೆಗಳು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
::: ಮೌಲ್ಯಮಾಪನ ಸುಲಲಿತ :::
ಲಾಕ್ ಡೌನ್ ನಡುವೆಯೇ ಮಡಿಕೇರಿಯ ಸಂತ ಮೈಕೆಲರ ಶಾಲೆಯಲ್ಲಿ ಜಿಲ್ಲಾಡಳಿತದ ಅನುಮತಿ ಮತ್ತು ಭದ್ರತೆಯೊಂದಿಗೆ ಎಸ್‍ಎಸ್‍ಎಲ್‍ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಿರಾತಂಕವಾಗಿ ನಡೆಯಿತು.
ಆರಂಭಿಕ ದಿನಗಳಲ್ಲಿ ಕೊಡಗು ಬಹುತೇಕ ಕೊರೊನಾ ಸೋಂಕಿನಿಂದ ಮುಕ್ತವಾಗಿತ್ತು. ಹೀಗಿದ್ದೂ ಇತ್ತೀಚಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಏರುಮುಖವಾಗಿ ಸಾಗುತ್ತಿದೆ. ಅದರಲ್ಲೂ ಬೆಂಗಳೂರು, ಮಹಾರಾಷ್ಟ್ರ ಮತ್ತು ದುಬೈನಿಂದ ಜಿಲ್ಲೆಗೆ ಆಗಮಿಸಿದ ಬಹುತೇಕ ಮಂದಿಯಲ್ಲಿ ಕೊರೊನಾ ಸೋಂಕು ದೃಢಪಡುತ್ತಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಅಲ್ಲಿನ ಸಂಘ ಸಂಸ್ಥೆಗಳೇ ತಾವಾಗಿಯೇ ವ್ಯಾಪಾರ ವಹಿವಾಟು ಸ್ಥಗಿತಗಗೊಳಿಸಿ ಬಂದ್ ನಡೆಸಿವೆ. ಇದೀಗ ಸರ್ಕಾರದ ಸೂಚನೆಯಂತೆ ನಡೆಯುತ್ತಿರುವ ಲಾಕ್‍ಡೌನ್‍ಗೆ ಜಿಲ್ಲೆಯ ಜನತೆ ಪೂರ್ಣ ಸಹಕಾರವನ್ನು ನೀಡಿರುವುದಲ್ಲದೆ, ಮತ್ತಷ್ಟು ದಿನದ ಲಾಕ್ ಡೌನ್ ಅವಶ್ಯವೆಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.