ಕೊಡಗಿನಲ್ಲಿ ವೈದ್ಯರ ಕೊರತೆಯಿದೆ : ವೈದ್ಯರು ಎಲ್ಲೇ ಇದ್ದರೂ ಕೊಡಗಿಗೆ ಬನ್ನಿ

18/07/2020

ಮಡಿಕೇರಿ ಜು.18 : ಕೊಡಗು ಜಿಲ್ಲೆಯಲ್ಲಿ ಸೌಲಭ್ಯಗಳಿಲ್ಲ ಎಂಬ ಮಾಹಿತಿ ಸುಳ್ಳು, ಆದರೆ ಕೊಡಗಿನಲ್ಲಿ ವೈದ್ಯರ ಕೊರತೆಯಿದೆ ಇರುವುದು ಸತ್ಯ. ಆದ್ದರಿಂದ ಕೊಡಗು ಮೂಲದ ವೈದ್ಯರು ಎಲ್ಲೇ ಇದ್ದರೂ ತಕ್ಷಣ ಕೊಡಗಿಗೆ ಬನ್ನಿ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.
ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ‘ಫೇಸ್ ಬುಕ್ ಲೈವ್’ ನಲ್ಲಿ ಮಾತನಾಡಿದ ಅವರು, ಕೊಡಗಿಗೆ ಸರ್ಕಾರ ಎಲ್ಲಾ ರೀತಿಯ ಮೂಲಸೌಲಭ್ಯ ಒದಗಿಸಿದೆ. ಎಲ್ಲ ಸೌಕರ್ಯಗಳೂ ಸುಸಜ್ಜಿತವಾಗಿವೆ. ಕೊರೋನಾ ಹಿನ್ನೆಲೆಯಲ್ಲಿ ಎರಡು ಸಾವಿರ ಹಾಸಿಗೆಗಳು ಕೊಡಗಿನಲ್ಲಿ ಮುಂಜಾಗ್ರತೆಯಾಗಿ ಸಿದ್ಧವಾಗಿವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಅತ್ಯುತ್ತಮ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೋವಿಡ್ ಕೇರ್ ಆಸ್ಪತ್ರೆಯಲ್ಲಿ 250 ಹಾಸಿಗೆಗಳಿವೆ. ಪ್ರತಿ ತಾಲೂಕುಗಳಲ್ಲೂ ಕೋವಿಡ್ ಕೇರ್ ಸೆಂಟರ್‍ಗಳಿವೆ. ಆದರೆ, ಕೊಡಗು ಜಿಲ್ಲೆಯಲ್ಲಿ ವೈದ್ಯರ ಕೊರತೆಯಿದೆ. ಮೆಡಿಕಲ್ ಕಾಲೇಜಿನಲ್ಲಿ ವಾಕ್ ಇನ್ ಸಂದರ್ಶನಕ್ಕೂ ಕರೆ ನೀಡಿದ್ದೇವೆ. 60 ಸಾವಿರ ಸಂಬಳ ನೀಡುತ್ತೇವೆ ಎಂದಿದ್ದೇವೆ. ಹೀಗಿದ್ದರೂ ವೈದ್ಯರು ನೇಮಕಾತಿಗೆ ಬರುತ್ತಿಲ್ಲ. ಕೇವಲ ಇಬ್ಬರು ಮಾತ್ರ ಸಂದರ್ಶನಕ್ಕೆ ಹಾಜರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
::: ವೈದ್ಯರೇ ತಕ್ಷಣ ಬನ್ನಿ :::
ಕೊಡಗಿನ ಮೂಲದ ವೈದ್ಯರು ಬೇರೆ ಕಡೆಯಿದ್ದರೆ ಕೂಡಲೇ ಮರಳಿ ಕೊಡಗಿಗೆ ಬನ್ನಿ, ನಿಮ್ಮ ತವರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಇದೊಂದು ಅತ್ಯುತ್ತಮ ಅವಕಾಶ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಣಣಿ ಜಾಯ್ ಮನವಿ ಮಾಡಿದ್ದಾರ. ಇದನ್ನೇ ಬೆಸ್ಟ್ ಟೈಂ ಎಂದು ಪರಿಗಣಿಸಿ ಮರಳಿ ಕೊಡಗಿಗೆ ಕರ್ತವ್ಯಕ್ಕೆ ಬನ್ನಿ ಎಂದು ಕರೆ ನೀಡಿದರು.
ಸಂಕಷ್ಟ ಕಾಲದಲ್ಲೂ ನಮ್ಮ ವೈದ್ಯರು ಸೋಂಕಿತ ಗರ್ಭಿಣಿ ಮಹಿಳೆಗೆ ಯಶಸ್ವಿ ಹೆರಿಗೆ ಮಾಡಿಸಿ ಮಗುವಿನ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಶ್ಲಾಘಿಸಿದ ಅವರು, ಕೊರೋನಾ ಸಮಸ್ಯೆಯ ದಿನಗಳು ಸಾಗುವ ಮಾರ್ಗ ಬಹಳ ದೂರವಿದೆ. ಇದು ಮ್ಯಾರಥಾನ್ ಇದ್ದಂತೆ. ಓಡಲು ಆರಂಭಿಸಿದ ತಕ್ಷಣವೇ ಗೆದ್ದಿದ್ದೇವೆ ಎಂದು ಬೀಗುವಂತಿಲ್ಲ. ಗುರಿ ಮುಟ್ಟುವ ತನಕ ಓಡಿದಾಗಲಷ್ಟೇ ಗೆಲುವು ಯಾರದ್ದು ಎಂದು ಗಮನಕ್ಕೆ ಬರುತ್ತದೆ. ಆದುದರಿಂದ ಎಲ್ಲರ ಸಹಕಾರದಿಂದ ಸಮಸ್ಯೆಯನ್ನು ಯಶಸ್ವಿಯಾಗಿ ಎದುರಿಸೋಣ ಎಂದೂ ಕರೆ ನೀಡಿದರು.