ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 274ಕ್ಕೆ ಏರಿಕೆ

19/07/2020

ಮಡಿಕೇರಿ ಜು.19 : ಕೊಡಗು ಜಿಲ್ಲೆಯಲ್ಲಿ ಭಾನುವಾರ ಮತ್ತೆ 10 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ.
ಸೋಮವಾರಪೇಟೆ ಕಕ್ಕೆಹೊಳೆಯ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ 32 ವರ್ಷ ಹಾಗೂ 26 ವರ್ಷದ ಇಬ್ಬರು ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದ್ದು, ಸೋಮವಾರಪೇಟೆ ತಾಲೂಕಿನ ತೊರೆನೂರು ಗ್ರಾಮದ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ವರ್ಷದ ಪುರುಷ, 48 ಹಾಗೂ 76 ವರ್ಷದ ಮಹಿಳೆಯಲ್ಲೂ ಸೋಂಕು ಗೋಚರಿಸಿದೆ.
ಸೋಮವಾರಪೇಟೆ ತಾಲೂಕಿನ ವಾಲ್ನೂರು ಗ್ರಾಮದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ 28 ವರ್ಷದ ಮಹಿಳೆ ಹಾಗೂ ಕುಶಾಲನಗರ ಬಲಮುರಿ ಕಾಲೋನಿಯ ಸೋಂಕಿತರ ಸಂಪರ್ಕದಲ್ಲಿದ್ದ 7 ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ.
ಮತ್ತೊಂದೆಡೆ ವೀರಾಜಪೇಟೆ ತಾಲೂಕಿನ ಬೆಂಗಳೂರು ಪ್ರಯಾಣದ ಇತಿಹಾಸವಿರುವ ಗೋಣಿಕೊಪ್ಪ ಹರಿಶ್ಚಂದ್ರಪುರದ ನಿವಾಸಿ 20 ವರ್ಷದ ಮಹಿಳೆ ಹಾಗೂ ಜ್ವರ ಲಕ್ಷಣವಿರುವ ಗೋಣಿಕೊಪ್ಪ 2ನೇ ಬ್ಲಾಕ್‍ನ 39 ವರ್ಷದ ಪುರುಷ ಮತ್ತು ಬೆಂಗಳೂರು ಪ್ರಯಾಣದ ಇತಿಹಾಸವಿರುವ ಮಡಿಕೇರಿ ತಾಲೂಕಿನ ಅವಂದೂರು ಗ್ರಾಮದ 38 ವರ್ಷದ ಪುರುಷನಲ್ಲೂ ಕೋವಿಡ್-19 ಸೋಂಕು ಇರುವುದು ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 274ಕ್ಕೆ ಏರಿಕೆಯಾಗಿದ್ದು, ಈ ಪೈಕಿ 175 ಮಂದಿ ಗುಣಮುಖರಾಗಿದ್ದಾರೆ. ಐದು ಮಂದಿ ಸಾವಿಗೀಡಾಗಿದ್ದು, 95 ಪ್ರಕರಣಗಳು ಸಕ್ರಿಯವಾಗಿವೆ ಎಂದು ಅವರು ಹೇಳಿದ್ದಾರೆ.
ಭಾನುವಾರ ಜಿಲ್ಲೆಯಲ್ಲಿ ಹೊಸದಾಗಿ ಮಡಿಕೇರಿ ತಾಲೂಕಿನ ಅವಂದೂರು ಹಾಗೂ ಗೋಣಿಕೊಪ್ಪದ 2ನೇ ಬ್ಲಾಕ್ ಪ್ರದೇಶಗಳನ್ನು ನಿಯಂತ್ರಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಇದರೊಂದಿಗೆ ನಿಯಂತ್ರಿತ ಪ್ರದೇಶಗಳ ಸಂಖ್ಯೆ 112ಕ್ಕೆ ಏರಿಕೆಯಾಗಿದೆ. ಸೋಂಕಿತರು ದೂರವಾಣಿ ಮೂಲಕ ನೀಡಿರುವ ಮಾಹಿತಿ ಅನ್ವಯ ಅವರ ವಾಸವಿರುವ ಪ್ರದೇಶವನ್ನು ಹೆಸರಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿದ ಸಂದರ್ಭ ಇದು ಬದಲಾಗುವ ಸಾಧ್ಯತೆ ಇರುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.