ಹಸುಗಳಿಗೆ ವಿಷ ಹಾಕಿ ಹತ್ಯೆ : ಐಗೂರು ಗ್ರಾಮದಲ್ಲಿ ಘಟನೆ

19/07/2020

ಮಡಿಕೇರಿ ಜು.19 : ತೋಟವನ್ನು ಪ್ರವೇಶಿಸಿದ 9 ಕ್ಕೂ ಹೆಚ್ಚು ಹಸುಗಳನ್ನು ವಿಷ ಹಾಕಿ ಕೊಂದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮದ ಡಿಬಿಡಿ ಟಾಟಾ ಎಸ್ಟೇಟ್‍ನಲ್ಲಿ ನಡೆದಿದೆ.
ಸ್ಥಳೀಯ ಗ್ರಾಮಸ್ಥರ ಹಸುಗಳು ತೋಟಕ್ಕೆ ನುಸುಳಿ ಹಾನಿ ಉಂಟು ಮಾಡುತ್ತಿದ್ದವೆಂದು ಬಾಳೆಹಣ್ಣಿಗೆ ವಿಷ ಬೆರೆಸಿ ಹಸುಗಳನ್ನು ಕೊಲ್ಲಲಾಗಿದೆ. ಹಸುಗಳ ಮೃತ ದೇಹವನ್ನು ಯಾರಿಗೂ ಅನುಮಾನ ಬಾರದಂತೆ ಎಸ್ಟೇಟ್ ಒಳಗಿನ ದೊಡ್ಡ ಕಂದಕಕ್ಕೆ ಹಾಕಿ ಮರಗಳನ್ನು ಕಡಿದು ಹಾಕಿದ್ದಾರೆ. ಗ್ರಾಮಸ್ಥರು ನಾಪತ್ತೆಯಾಗಿದ್ದ ಹಸುಗಳನ್ನು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಎಸ್ಟೇಟ್ ಆಡಳಿತ ಮಂಡಳಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಸುಗಳ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಸ್ಥಳಕ್ಕೆ ಆಗಮಿಸಿದ ಹಿಂದೂ ಜಾಗರಣಾ ವೇದಿಕೆ ಪ್ರಮುಖರು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.