ಲಡಾಖ್ ಗಡಿಯಲ್ಲಿ ರಫೇಲ್ ಯುದ್ಧ ವಿಮಾನ

20/07/2020

ನವದೆಹಲಿ ಜು.20 : ಗಲ್ವಾನ್ ಘರ್ಷಣೆಯ ಬಳಿಕ ಲಡಾಖ್ ಗಡಿಯಲ್ಲಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು ಈಗಾಗಲೇ ಹಾರಾಟ ನಡೆಸುತ್ತಿವೆ. ಈಗ ಇವುಗಳ ಜೊತೆ ರಫೇಲ್ ಯುದ್ಧ ವಿಮಾನಗಳನ್ನು ನಿಯೋಜಿಸಲು ವಾಯುಸೇನೆ ಚಿಂತನೆ ನಡೆಸಿದೆ.
ಭಾರತ ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ ವಾಯು ಸೇನೆ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ ನೇತೃತ್ವದ ಉನ್ನತ ವಾಯುಪಡೆಯ ಕಮಾಂಡರ್ ಗಳ ತಂಡ ಎರಡು ದಿನಗಳ ಕಾಲ ಲಡಾಕ್‍ಗೆ ಭೇಟಿ ನೀಡಲಿದೆ.
ಭೂ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಭೇಟಿ ಬಳಿಕ ವಾಯು ಸೇನೆ ತಂಡ ಭೇಟಿ ನೀಡುತ್ತಿದ್ದು, ಲಡಾಕ್‍ನಲ್ಲಿರುವ ಚೀನಾ ಭಾರತದ ವಾಸ್ತವ ನಿಯಂತ್ರಣ ರೇಖೆ(ಎಲ್‍ಎಸಿ) ಪ್ರದೇಶ ಹಾಗೂ ಆ ಭಾಗದಲ್ಲಿ ನಡೆಯುತ್ತಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಪರಿಸ್ಥಿತಿಯ ಪರಿಶೀಲನೆ ನಡೆಸಲಿದೆ.
ಎರಡು ದಿನದ ಭೇಟಿಯಲ್ಲಿ ಈ ಪ್ರದೇಶದಲ್ಲಿ ವಾಯುಪಡೆ ಅವಳಿ-ಎಂಜಿನ್ ಫೈಟರ್ ಜೆಟ್ ಹಾಗೂ ಜುಲೈ ಅಂತ್ಯದ ವೇಳೆಗೆ ಭಾರತಕ್ಕೆ ಬರಲಿರುವ ರಫೇಲ್ ಫೈಟರ್ ಜೆಟ್‍ಗಳು ನಿಯೋಜಿಸುವ ಬಗ್ಗೆ ಮುಖ್ಯವಾಗಿ ಚರ್ಚೆಯಾಗಲಿದೆ. ಸುಖೋಯ್-30 ಎಂಕೆಐ ಮತ್ತು ಮಿರಾಜ್-2000 ಸೇರಿದಂತೆ ಇತರ ಫೈಟರ್ ಜೆಟ್‍ಗಳ ಸಮನ್ವಯದೊಂದಿಗೆ ಉತ್ತರದ ಗಡಿಗಳಲ್ಲಿ ರಫೇಲ್ ಫೈಟರ್ ಜೆಟ್‍ಗಳನ್ನು ಶೀಘ್ರವಾಗಿ ನಿಯೋಜಿಸುವ ಬಗ್ಗೆ ವಾಯುಪಡೆ ಗಮನ ಹರಿಸಿದ್ದು, ಈ ಬಗ್ಗೆ ಯೋಜನೆಗಳನ್ನು ರೂಪಿಸಲಿದೆ.