ನಕಲಿ ವಿಡಿಯೋ ಹರಿಬಿಟ್ಟವನ ಬಂಧನ

20/07/2020

ಬೆಂಗಳೂರು ಜು.20 : ರಾಜಧಾನಿ ಬೆಂಗಳೂರಿನ ವಿಕ್ಟೋರಿಯಾದ ಆಸ್ಪತ್ರೆಯ ವಿಡಿಯೋ ಎಂದು ಹೇಳಿ ನಕಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಇದು ನಕಲಿ ವಿಡಿಯೋವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಅತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
ಬಂಧಿತನನ್ನು ತಿಲಕ್ ನಗರದ ಸಮೀರವುಲ್ಲಾ ಎಂದು ಗುರುತಿಸಲಾಗಿದೆ. ಹೊರ ರೋಗಿ ವಿಭಾಗದ ಕೊಠಡಿ ಮುಂಭಾಗ
ಅಪಾರ ಸಂಖ್ಯೆಯಲ್ಲಿ ರೋಗಿಗಳು ನೆರೆದಿರುವ ವಿಡಿಯೋ ವಿಕ್ಟೋರಿಯಾ ಆಸ್ಪತ್ರೆಯದ್ದು ಎಂದು ಹೇಳಿ ಆರೋಪಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದ.ಅದು ಟ್ವಿಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಕ್ಷೀಪ್ರಗತಿಯಲ್ಲಿ ಕಾರ್ಯಾಚರಣೆ
ನಡೆಸಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.