ಹಿರಿಯ ನಟಿ ಬಿ. ಶಾಂತಮ್ಮ ನಿಧನ

ಬೆಂಗಳೂರು : ಹಿರಿಯ ನಟಿ ಬಿ. ಶಾಂತಮ್ಮ ಇಂದು ತಮ್ಮ ಮಗಳ ಮನೆಯಲ್ಲಿ ನಿಧನ ಹೊಂದಿದ್ದಾರೆ.
ಅವರಿಗೆ 95 ವರ್ಷ ವಯಸ್ಸಾಗಿತ್ತು. ಸುಮಾರು 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶಾಂತಮ್ಮ 1956ರಲ್ಲಿ ಚಿತ್ರರಂಗವನ್ನು ಪ್ರವೇಶಿಸಿದ್ದರು.
ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಶಾಂತಮ್ಮ ಅವರು ಪೋಷಕ ಪಾತ್ರ ನಿರ್ವಹಣೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು.
ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಷ್, ರಜನಿಕಾಂತ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವಾರು ನಾಯಕ ನಟರ ಚಿತ್ರಗಳಲ್ಲಿ ಶಾಂತಮ್ಮ ಅವರು ಪಾತ್ರ ನಿರ್ವಹಿಸಿದ್ದರು.
95 ವರ್ಷ ಪ್ರಾಯದ ಶಾಂತಮ್ಮ ಅವರಿಗೆ ಹೃದಯ ಸಂಬಂಧಿ ಹಾಗೂ ಮರೆವಿನ ಸಮಸ್ಯೆ ಇತ್ತು. ಈ ಕಾರಣದಿಂದ ಅವರನ್ನು ಅವರ ಪುತ್ರಿ ಬೆಂಗಳೂರಿನಿಂದ ಮೈಸೂರಿಗೆ ಕರೆಸಿಕೊಂಡಿದ್ದರು.
ಶನಿವಾರ ರಾತ್ರಿ ಶಾಂತಮ್ಮ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟು ಹೋಯಿತು, ಮತ್ತು ಆಸ್ಪತ್ರೆಯಲ್ಲಿ ಸಕಾಲದಲ್ಲಿ ಬೆಡ್ ಸಿಗದೇ ಚಿಕಿತ್ಸೆ ಸಿಗುವುದೂ ತಡವಾಯಿತು ಹಾಗಾಗಿ ಅಮ್ಮನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಅವರ ಪುತ್ರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಮ್ಮನಿಗೆ ಮರೆವಿನ ಕಾಯಿಲೆ ಇತ್ತು. ನನ್ನ ಗುರುತೂ ಅವರಿಗೆ ಸಿಗುತ್ತಿರಲಿಲ್ಲ. ಆದರೆ ತಮ್ಮ ಕೊನೇ ಸಮಯದಲ್ಲೂ ಅಪ್ಪು, ಶಿವಣ್ಣ, ರಾಘಣ್ಣ ಅಂತ ಕನವರಿಸುತ್ತಿದ್ದರು ಮತ್ತು ಅವರನ್ನು ನೋಡ್ಬೇಕು ಅಂತ ಹೇಳ್ತಿದ್ರು ಎಂದು ಅಮ್ಮನ ಅಂತಿಮ ಕ್ಷಣವನ್ನು ನೆನಪಿಸಿಕೊಂಡು ಮಗಳು ಭಾವುಕರಾದರು.
ಅಮ್ಮನಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು ಅದರ ವರದಿ ಬಂದ ಬಳಿಕವಷ್ಟೇ ಮೃತದೇಹದ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
