ಕಾಡಾನೆಗಳ ದಾಳಿ ನಿರಂತರ : ಅಸಹಾಯಕರಾದ ಗ್ರಾಮಸ್ಥರು

20/07/2020

ಮಡಿಕೇರಿ ಜು.20 : ಕಣ್ಣಿಗೆ ಕಾಣದ ಕೊರೋನಾ ಸೋಂಕಿನ ದಾಳಿಯಿಂದ ಬೆದರಿರುವ ಗ್ರಾಮೀಣ ಜನ ಸ್ವಯಂ ನಿಯಂತ್ರಣಕ್ಕೆ ಒಳಪಟ್ಟು ಲಾಕ್‍ಡೌನ್, ಸೀಲ್‍ಡೌನ್‍ಗಳ ನ ನಡುವೆ ಜೀವನ ಸಾಗಿಸುತ್ತಿದ್ದಾರೆ. ಇದರ ನಡುವೆಯೇ ಕಾಡಾನೆಗಳು ರಾಜಾರೋಷವಾಗಿ ನಾಡಿಗೆ ಲಗ್ಗೆ ಇಟ್ಟು ಆತಂಕವನ್ನು ಸೃಷ್ಟಿಸುತ್ತಿದ್ದು, ಗ್ರಾಮಸ್ಥರು ಅಸಹಾಯಕ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ.
ಸರ್ಕಾರ ಕೊಡಗಿನ ಅರಣ್ಯ ಪ್ರದೇಶವನ್ನು ಸರ್ವೆಗೆ ಒಳಪಡಿಸಿದರೆ ಯಾವುದೇ ಕಾಡಾನೆಗಳು ಪತ್ತೆಯಾಗಲು ಸಾಧ್ಯವಿಲ್ಲ. ಕಾಡಿನ ಬದಲಿಗೆ ಆನೆಗಳೆಲ್ಲವೂ ನಾಡಿನ ತೋಟಗಳಲ್ಲಿ ಆಶ್ರಯ ಪಡೆದಿರುವುದು ಖಾತ್ರಿಯಾಗಲಿದ್ದು, ಈ ಜಟಿಲ ಪರಿಸ್ಥಿತಿಯನ್ನು ಅರಣ್ಯ ಇಲಾಖೆಯೇ ನಿಭಾಯಿಸಬೇಕಾಗಿದೆ. ಆದರೆ ಅಧಿಕಾರಿಗಳು ವಾಲ್ನೂರು, ತ್ಯಾಗತ್ತೂರು, ಅಭ್ಯತ್ ಮಂಗಲ, ನೆಲ್ಯಹುದಿಕೇರಿ, ಸಿದ್ದಾಪುರ ಸುತ್ತಮುತ್ತಲ ಭಾಗದ ಗ್ರಾಮಗಳನ್ನು ಕಾಡಾನೆಗಳಿಗಾಗಿಯೇ ಮೀಸಲಿಟ್ಟಂತೆ ಕಂಡು ಬಂದಿದೆ.
ಪ್ರತಿದಿನ ಸುಮಾರು 30- 40 ಕಾಡಾನೆಗಳ ಹಿಂಡು ರಾಜಮಾರ್ಗದಲ್ಲೇ ಸಂಚರಿಸಿದರೂ, ಸಿಕ್ಕ ಸಿಕ್ಕ ತೋಟಗಳಲ್ಲೇ ಅಡ್ಡಾಡಿದರೂ ಏನೂ ತಿಳಿದೇ ಇಲ್ಲ ಎನ್ನುವ ರೀತಿಯಲ್ಲಿ ಅರಣ್ಯ ಅಧಿಕಾರಿಗಳು ಕೈಚೆಲ್ಲಿ ಕುಳಿತ್ತಿದ್ದಾರೆ. ಸರ್ಕಾರದ ಆದೇಶಕ್ಕಾಗಿಯೇ ಕಾದು ಕುಳಿತುಕೊಳ್ಳುವ ಅಧಿಕಾರಿಗಳಿಂದಾಗಿ ಗ್ರಾಮಸ್ಥರು ಬಡವಾಗಿದ್ದಾರೆ. ಪ್ರಾಕೃತಿಕ ವಿಕೋಪ ಮತ್ತು ಹಾವಾಗುಣ ವೈಪರೀತ್ಯದ ನಡುವೆಯೂ ರೈತರು ಹಾಗೂ ಬೆಳೆಗಾರರು ಕೃಷಿ ಕಾರ್ಯದಲ್ಲಿ ಮತ್ತು ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರಮಪಟ್ಟು ಭೂಮಿಯಲ್ಲಿ ಫಸಲು ತೆಗೆಬೇಕೆನ್ನುವ ವೇಳೆಯಲ್ಲೇ ಕಾಡಾನೆಗಳ ಹಿಂಡು ದಾಳಿ ಮಾಡಿ ನಾಶ ಪಡಿಸುತ್ತಿವೆ. ಈ ಭಾಗದ ಎಲ್ಲಾ ಗದ್ದೆ, ತೋಟಗಳಿಗೆ ಲಗ್ಗೆ ಇಟ್ಟಿರುವ ವನ್ಯಜೀವಿಗಳು ಸಾಕಷ್ಟು ಹಾನಿ ಉಂಟು ಮಾಡಿವೆ. ತೋಟಗಳನ್ನೇ ಆವಾಸ ಸ್ಥಾನಗಳನ್ನಾಗಿ ಮಾಡಿಕೊಂಡಿರುವ ಆನೆಗಳು ಅರಣ್ಯದ ಕಡೆ ಮುಖ ಮಾಡುತ್ತಿಲ್ಲ. ಬೆಳೆನಾಶ ಮಾತ್ರವಲ್ಲದೆ ಮಾನವ ಜೀವಹಾನಿಯನ್ನು ಕೂಡ ಇವುಗಳು ಮಾಡಿವೆ.
ಇತ್ತೀಚಿನ ದಿನಗಳಲ್ಲಿ ಹೋದ ಜೀವಕ್ಕೆ ಪರಿಹಾರ ಸಿಗುತ್ತಿದೆಯೇ ಹೊರತು ಕೈಕಾಲು ಮುರಿದುಕೊಂಡು ಅರ್ಧಜೀವವಾದ ಬಡಪಾಯಿಗಳಿಗೆ ಒಂದು ರೂಪಾಯಿ ಕೂಡ ಸಿಗುತ್ತಿಲ್ಲ. ಆನೆ ದಾಳಿಗೆ ಸಿಲುಕಿ ಶಾಶ್ವತ ಅಂಗವೈಕಲ್ಯತೆಗೆ ಒಳಗಾದ ಅನೇಕ ಪ್ರಕರಣಗಳು ಕಣ್ಣಮುಂದೆಯೇ ಇದೆ. ಆದರೆ ಯಾರ ಬಗ್ಗೆಯೂ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಕರುಣೆಯೇ ಬರುತ್ತಿಲ್ಲವೆಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
ಕಾಟಾಚಾರಕ್ಕೆ ಸಸಿಗಳನ್ನು ನೆಡುವ ನರ್ಸರಿಗಳನ್ನು ನಿರ್ವಹಣೆ ಮಾಡುತ್ತಿರುವ ಅರಣ್ಯ ಇಲಾಖೆ ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಯಾವುದೇ ಪ್ರಯೋಜನಕ್ಕೆ ಬಾರದ ಸಸಿಗಳನ್ನು ಅಭಿವೃದ್ಧಿಪಡಿಸಿ ವನ್ಯಜೀವಿಗಳಿಗೆ ಆಹಾರದ ಕೊರತೆಯನ್ನು ಸೃಷ್ಟಿಸಲಾಗುತ್ತಿದೆ. ಅರಣ್ಯದಲ್ಲಿ ಆಹಾರ ಸಿಗದೆ ಇರುವುದರಿಂದಲೇ ಕಾಆನೆಗಳು ಹಿಂಡು ಹಿಂಡಾಗಿ ತೋಟಗಳಲ್ಲಿ ನೆಲೆ ನಿಲ್ಲಲು ಕಾರಣವೆಂದು ಬೆಳೆಗಾರರು ಅಭಿಪ್ರಾಯಪಡುತ್ತಾರೆ.
ಅರಣ್ಯ ಪ್ರದೇಶದಲ್ಲಿ ಹಲಸು ಸೇರಿದಂತೆ ವಿವಿಧ ಬಗೆಯ ಹಣ್ಣಿನ ಮರಗಳನ್ನು ಉಳಿಸಿ, ಬೆಳೆಸುವ ಮೂಲಕ ವನ್ಯಜೀವಿಗಳಿಗೆ ಶಾಶ್ವತ ಆಹಾರವನ್ನು ಒದಗಿಸುವ ಯೋಜನೆಯನ್ನು ಸರ್ಕಾರ ಅರಣ್ಯ ಇಲಾಖೆಯ ಮೂಲಕ ಸಾಕಾರಗೊಳಿಸಿದಾಗ ಮಾತ್ರ ಭವಿಷ್ಯದಲ್ಲಿ ಕೊಡಗಿನಲ್ಲಿ ರೈತರು ಹಾಗೂ ಬೆಳೆಗಾರರು ಉಳಿಯಲು ಸಾಧ್ಯ. ನಿರ್ಲಕ್ಷ್ಯ ವಹಿಸಿದರೆ ಕೃಷಿ ಭೂಮಿ ಸಂಪೂರ್ಣವಾಗಿ ನಾಶವಾಗಿ ಕೃಷಿಯನ್ನೇ ನಂಬಿರುವ ಮೂಲ ನಿವಾಸಿ ಕುಟುಂಬಗಳು ಜಿಲ್ಲೆಯನ್ನೇ ತೊರೆಯುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳ ಅಸಡ್ಡೆಯ ಬಗ್ಗೆಯೂ ಅಸಮಾಧಾನಗೊಂಡಿದ್ದಾರೆ.
ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗಟ್ಟುವ ಡ್ರಾಮಾ ಮಾಡುತ್ತಿದ್ದಾರೆಯೇ ಹೊರತು ಈ ಕಾರ್ಯಾಚರಣೆಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ತೋಟದಿಂದ ತೋಟಕ್ಕೆ ಆನೆ ಹಿಂಡಿನ ಸಂಚಾರವಾಗುತ್ತಿದ್ದು, ಅಧಿಕಾರಿಗಳು ನೈಪುಣ್ಯದಿಂದ ಯೋಜನೆ ರೂಪಿಸುತ್ತಿಲ್ಲ ಮತ್ತು ಕಾಡಿಗಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲವೆಂದು ಗ್ರಾಮಸ್ಥರು ಟೀಕಿಸಿದ್ದಾರೆ. ಕಾಡಾನೆಗಳನ್ನು ಮೊದಲು ಲಾಕ್‍ಡೌನ್ ನಲ್ಲಿಡಿ ಎಂದು ಒತ್ತಾಯಿಸಿದ್ದಾರೆ.