ಸೋಮವಾರಪೇಟೆಯಲ್ಲಿ ನಿಯಮ ಮೀರಿ ನಡೆದ ವಾರದ ಸಂತೆ

20/07/2020

ಮಡಿಕೇರಿ ಜು. 20 : ಕೋವಿಡ್-19 ಸೋಂಕು ಹಿನ್ನೆಲೆ ಸೋಮವಾರಪೇಟೆ ಪಟ್ಟಣದ ಸೋಮವಾರದ ಸಂತೆಯನ್ನು ತಾಲೂಕು ಆಡಳಿತ ರದ್ದುಗೊಳಿಸಿದ್ದರೂ, ಆವರಣದ ಹೊರಗೆ ತರಕಾರಿ ಮಾರಾಟಕ್ಕೆ ಮುಂದಾದ ವ್ಯಾಪಾರಿಗಳನ್ನು ತರಕಾರಿ ಸಮೇತ ಪೊಲೀಸರು ತೆರವುಗೊಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಹಾಗೂ ಆರೋಗ್ಯ ನಿರೀಕ್ಷಕ ಉದಯ ಕುಮಾರ್ ಅವರ ಸೂಚನೆಯಂತೆ ಬೆಳಿಗ್ಗೆ ಮಾರುಕಟ್ಟೆಯ ಎಲ್ಲಾ ದ್ವಾರಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದನ್ನು ಕಂಡ ತರಕಾರಿ, ದಿನಸಿ ವ್ಯಾಪಾರಿಗಳು ರಸ್ತೆಯ ಬದಿಗಳಲ್ಲಿ ಮಾರಾಟಕ್ಕೆ ಮುಂದಾದರು.
ಜನ ಸಂದಣಿ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಅಂಗಡಿಗಳನ್ನು ತೆರವುಗೊಳಿಸಿದರು. ತರಕಾರಿ ವ್ಯಾಪಾರಸ್ಥರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ, ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದ ದೊಡ್ಡ ಸಮಸ್ಯೆಯಾಗುತ್ತಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.