ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಸ್ಥಾನ ಕಲ್ಪಿಸಲು ಶಾಹಿದ್ ಒತ್ತಾಯ

20/07/2020

ಮಡಿಕೇರಿ ಜು.20 : ರಾಜ್ಯದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಸಲೀಮ್ ಅಹಮ್ಮದ್ ಅವರುಗಳಿಗೆ ಸ್ಥಾನ ಕಲ್ಪಿಸಬೇಕೆಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಟಿ.ಎಂ.ಶಾಹಿದ್ ತೆಕ್ಕಿಲ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ರಾಜ್ಯ ಸರಕಾರ ರಚಿಸಿರುವ ಟಾಸ್ಕ್ ಫೋರ್ಸ್ ಸಮಿತಿ ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿಗಳು ತಮ್ಮ ಇಳಿ ವಯಸ್ಸಿನಲ್ಲೂ ಸತತವಾಗಿ ಸಭೆಗಳನ್ನು ನಡೆಸಿ ಸೋಂಕು ವ್ಯಾಪಿಸುವುದನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಚಿವರುಗಳು ತಮ್ಮ ತಮ್ಮ ಜವಬ್ದಾರಿಯನ್ನು ಮರೆತು ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಶಾಹಿದ್ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಪ್ರಯೋಗಾಲಯಗಳ ವರದಿ ಕೂಡ ವಿಭಿನ್ನವಾಗಿ ಬರುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಸಂಶಯಗಳು ಮೂಡುತ್ತಿದೆ. ಮಾಸ್ಕ್, ಸ್ಯಾನಿಟೈಸರ್, ಹಾಸಿಗೆ, ವೆಂಟಿಲೇಟರ್ ಹಾಗೂ ಔಷಧಿಗಳ ಖರೀದಿಯಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳಿದೆ. ಕೊರೋನಾ ಸಂದಿಗ್ಧ ಪರಿಸ್ಥಿತಿಯ ನಿರ್ವಹಣೆ ಮತ್ತು ವ್ಯವಹಾರಗಳು ಪಾರದರ್ಶಕವಾಗಿರಬೇಕೆಂದರೆ ಟಾಸ್ಕ್ ಫೋರ್ಸ್ ಸಮಿತಿಯನ್ನು ಪುನರ್ ರಚಿಸಿ ಸಚಿವರುಗಳನ್ನು ಸಮಿತಿಯಿಂದ ಕೈಬಿಡಬೇಕು.
ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಪಕ್ಷಗಳ ಅಧ್ಯಕ್ಷರು, ಮುಖಂಡರು, ಸಾಮಾಜಿಕ ಬದ್ಧತೆ ಇರುವ ವೈದ್ಯಕೀಯ ಕಾಲೇಜುಗಳ ಹಾಗೂ ಆಸ್ಪತ್ರೆಗಳ ಮುಖ್ಯಸ್ಥರು ಸೇರಿದಂತೆ ಪ್ರಚಾರ ಬಯಸದ ತಜ್ಞರುಗಳನ್ನು ಸಮಿತಿಯಲ್ಲಿ ಸೇರಿಸಿಕೊಂಡು ಜನರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಸಂಶಯಗಳನ್ನು ದೂರ ಮಾಡಬೇಕೆಂದು ಶಾಹಿದ್ ಒತ್ತಾಯಿಸಿದ್ದಾರೆ.