ಎಲ್ಲಾ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸುತ್ತಿಲ್ಲ : ಜಿಲ್ಲಾಧಿಕಾರಿ ಸ್ಪಷ್ಟನೆ

20/07/2020

ಮಡಿಕೇರಿ ಜು.20 : ಕೋವಿಡ್ ಸಂಬಂಧ ಎಲ್ಲಾ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡುತ್ತಿಲ್ಲವೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟಪಡಿಸಿದ್ದಾರೆ.
ಕೊರೋನಾ ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ರೋಗ ಲಕ್ಷಣಗಳಿರದ ಮತ್ತು ಅತೀ ಕಡಿಮೆ ರೋಗ ಲಕ್ಷಣಗಳಿರುವ ಉತ್ತಮ ಆರೋಗ್ಯ ಸ್ಥಿತಿ ಇರುವ ಸೋಂಕಿತರನ್ನು ಅವರವರ ಮನೆಗಳಲ್ಲಿ ಅಥವಾ ಕೋವಿಡ್ ಕೇರ್ ಸೆಂಟರ್‍ಗಳಲ್ಲಿಟ್ಟು ಉಪಚರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ದಾಖಲಿಸಿರುವ ಸೋಂಕಿತರನ್ನು ದಿನಂಪ್ರತಿ ವೈದ್ಯರು ಮತ್ತು ದಾದಿಯರು ಪರೀಕ್ಷಿಸಿ ಚಿಕಿತ್ಸೆ ನೀಡತ್ತಿದ್ದಾರೆ. ಹೋಂ ಐಸೋಲೇಷನ್‍ನಲ್ಲಿರಲು ಇಚ್ಛಿಸುವ ಕೋವಿಡ್ ಸೋಂಕಿತರನ್ನು ವೈದ್ಯರು ಒಂದು ಬಾರಿ ಎಲ್ಲಾ ರೀತಿಯಲ್ಲಿ ಪರೀಕ್ಷಿಸಿದ ನಂತರ ಹೋಂ ಐಸೋಲೇಷÀನ್‍ನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅವರಿಗೆ ಸೂಕ್ತ ತಿಳುವಳಿಕೆ ನೀಡಿ, ಅವರನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.