ರಾಷ್ಟ್ರೀಯ ತೋಟಗಾರಿಕಾ ಮಿಷನ್ : ಯೋಜನೆ ಅನುಷ್ಠಾನಕ್ಕೆ ಸಿಇಒ ಕೆ.ಲಕ್ಷ್ಮಿಪ್ರಿಯ ಸೂಚನೆ

20/07/2020

ಮಡಿಕೇರಿ ಜು.20 : ಪ್ರಸಕ್ತ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಕಾರ್ಯಕ್ರಮಗಳನ್ನು ಸಕಾಲದಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಸೂಚನೆ ನೀಡಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ತೋಟಗಾರಿಕಾ ಮಿಷನ್‍ನ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತೋಟಗಾರಿಕೆಗೆ ವಿಫುಲ ಅವಕಾಶಗಳಿದ್ದು, ತೋಟಗಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹೆಚ್ಚಿನ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸುವಂತೆ ಅವರು ನಿರ್ದೇಶನ ನೀಡಿದರು.
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅನುಷ್ಠಾನ ಸಂದರ್ಭ ನಬಾರ್ಡ್, ಗ್ರಾ.ಪಂ, ಮೀನುಗಾರಿಕಾ ಇಲಾಖೆಗಳು ಸೇರಿದಂತೆ ಇತರ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿ. ಈ ಮೂಲಕ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ಯಶಸ್ವಿಯಾಗಿ ತಲುಪಿಸಿ ಎಂದು ಕೆ.ಲಕ್ಷ್ಮಿ ಪ್ರಿಯ ಅವರು ತಿಳಿಸಿದರು.
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಿಂದ ಜಿಲ್ಲೆಯ ರೈತರ ಆರ್ಥಿಕ ಮಟ್ಟ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ವರದಿ ನೀಡುವಂತೆ ಸಿಇಒ ಕೆ.ಲಕ್ಷ್ಮೀಪ್ರಿಯ ಅವರು ಹೇಳಿದರು.
ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕರಾದ ಶ್ರೀನಿವಾಸ್ ಅವರು ಮಾತನಾಡಿ, ಬ್ಯಾಂಕ್‍ಗಳಿಂದಲೂ ಮೀನುಕೃಷಿ ಮಾಡಲು ಅಗತ್ಯ ಸಾಲ ಸೌಲಭ್ಯ ಯೋಜನೆಗಳಿವೆ. ಈ ನಿಟ್ಟಿನಲ್ಲಿ ನೀರಿನ ಮೂಲಗಳ ನಿರ್ಮಾಣ ಸಂದರ್ಭ ಮೀನು ಕೃಷಿಯ ಬಗ್ಗೆಯೂ ಸಹ ಅವರಿಗೆ ಮಾಹಿತಿ ನಿಡುವಂತೆ ಸಲಹೆ ನೀಡಿದರು.
ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಎಚ್.ಶಶಿಧರ್ ಅವರು ಮಾತನಾಡಿ, 290 ಲಕ್ಷ ರೂ.ಗಳ ಕ್ರಿಯಾಯೋಜನೆ ಸಿದ್ಧವಿದೆ. ಹೊಸ ತೋಟಗಳ ಸ್ಥಾಪನೆ, ಹಳೆಯ ತೋಟಗಳ ಪುನಃಶ್ಚೇತನ, ನೀರಿನ ಮೂಲಗಳ ನಿರ್ಮಾಣ, ಅಣಬೆ ಕೃಷಿ ಸೇರಿದಂತೆ ಹತ್ತು ಹಲವು ಯೋಜನೆಗಳಿದ್ದು, ಜಿಲ್ಲೆಯನ್ನು ತೋಟಗಾರಿಕಾ ಕ್ಷೇತ್ರದಲ್ಲಿ ಮತ್ತಷ್ಟು ಬಲಪಡಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪ್ಯಾಕ್‍ಹೌಸ್, ಗ್ರಾಮೀಣ ಮಾರುಕಟ್ಟೆಗಳ ನಿರ್ಮಾಣ ಸೇರಿದಂತೆ ಹೊಸ ಯೋಜನೆಗಳು ರೈತರಿಗೆ ಮತ್ತಷ್ಟು ಸಹಕಾರಿಯಾಗಲಿದೆ. ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕೈಗೊಳ್ಳಲೂ ಸಹ ಅವಕಾಶಗಳಿವೆ ಎಂದು ಉಪ ನಿರ್ದೇಶಕರು ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಜಿ.ಪಂ ಸಿಇಒ ಕೆ.ಲಕ್ಷ್ಮೀಪ್ರಿಯ ಅವರು ಆಗಸ್ಟ್ 14 ರ ಒಳಗಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‍ನ ಯೋಜನೆಗಳನ್ನು ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸುವಂತೆ ಸೂಚಿಸಿದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಪ್ರಮೋದ್, ರಮೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧೀಕ್ಷಕರಾದ ರೋಶನ್ ಕಾಳಪ್ಪ ಇತರರು ಹಾಜರಿದ್ದರು.