ಕೊಡಗಿನಲ್ಲಿ 281 ಸೋಂಕಿತರಲ್ಲಿ 201 ಮಂದಿ ಗುಣಮುಖ

20/07/2020

ಮಡಿಕೇರಿ ಜು.20 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 281ಕ್ಕೆ ಏರಿಕೆಯಾಗಿದ್ದು, ಈ ಪೈಕಿ 201 ಮಂದಿ ಗುಣಮುಖರಾಗಿದ್ದಾರೆ.
ಸೋಮವಾರ ಮಡಿಕೇರಿಯ ದೇಚೂರುವಿನ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 41 ವರ್ಷದ ಮಹಿಳೆ ಹಾಗೂ 48 ವರ್ಷದ ಪುರುಷ, ಮಡಿಕೇರಿ ತಾಲೂಕು ಕಡಿಯತ್ತೂರು ಗ್ರಾಮದ ಬೆಂಗಳೂರು ಪ್ರಯಾಣದ ಹಿನ್ನೆಲೆಯ 24 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ವೀರಾಜಪೇಟೆ ತಾಲೂಕಿನ ತೋತೇರಿ ಗ್ರಾಮದ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 70 ವರ್ಷದ ಪುರುಷ ಹಾಗೂ 36 ವರ್ಷದ ಮಹಿಳೆ, ಬೆಂಗಳೂರು ಪ್ರಯಾಣದ ಹಿನ್ನೆಲೆ ಇರುವ ಕುಕ್ಲೂರು ಗ್ರಾಮದ 51 ವರ್ಷದ ಮಹಿಳೆ ಹಾಗೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಗೋಣಿಕೊಪ್ಪ ಜೋಡುಬೀಟಿಯ 38 ವರ್ಷದ ಮಹಿಳೆಯಲ್ಲೂ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 281ಕ್ಕೆ ಏರಿಕೆಯಾಗಿದ್ದು, ಈ ಪೈಕಿ 201 ಮಂದಿ ಗುಣಮುಖರಾಗಿದ್ದರೆ, 5 ಮಂದಿ ಸಾವಿಗೀಡಾಗಿದ್ದಾರೆ. ಪ್ರಸಕ್ತ 75 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸೋಮವಾರ ಜಿಲ್ಲೆಯಲ್ಲಿ ಹೊಸದಾಗಿ ವೀರಾಜಪೇಟೆ ತಾಲೂಕಿನ ಕುಕ್ಲೂರು ಹಾಗೂ ಜೋಡುಬೀಟಿ ಮತ್ತು ಮಡಿಕೇರಿ ತಾಲೂಕಿನ ಕಡಿಯತ್ತೂರು ಗ್ರಾಮದಲ್ಲಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಈ ಹಿಂದೆ ತೆರೆಯಲಾಗಿದ್ದ ಬಸವನಹಳ್ಳಿಯ ನಿಯಂತ್ರಿತ ಪ್ರದೇಶವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.