ರಾಜೀನಾಮೆ ಸವಾಲು ಹಾಕಿದ ಶ್ರೀರಾಮುಲು

21/07/2020

ಬೆಂಗಳೂರು ಜು.21 : ಕೋವಿಡ್-19 ಉಪಕರಣ, ಸಾಮಗ್ರಿಗಳು, ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ, ಅವ್ಯವಹಾರಗಳು ನಡೆದಿದ್ದರೆ ಕೂಡಲೇ ರಾಜೀನಾಮೆ ನೀಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ.
ವಿಕಾಸ ಸೌಧದಲ್ಲಿಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಜೊತೆ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕಾಶ ಭೂಮಿಗೆ ಎಷ್ಟು ದೂರ ಅಂತರ ಇದೆಯೋ ಅಷ್ಟೇ ಅಂತರದ ಸುಳ್ಳನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಒಂದು ವೇಳೆ ಅವ್ಯವಹಾರ ನಡೆಸಿರುವುದನ್ನು ಸಾಬೀತು ಮಾಡಿದರೆ ಒಂದು ಕ್ಷಣವು ಸಚಿವ ಸ್ಥಾನದಲ್ಲಿ ಮುಂದುವರೆಯುವುದಿಲ್ಲ. ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಬಿ ಶ್ರೀರಾಮುಲು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
ವೆಂಟಿಲೇಟರ್ ತಾಂತ್ರಿಕ ಅಂಶಗಳ ಆಧಾರದ ಮೇಲೆ ಖರೀದಿ ಮಾಡಬೇಕಾಗುತ್ತದೆ. ಸುಮಾರು 4 ಲಕ್ಷ ರೂ ಮೌಲ್ಯದ ವೆಂಟಿಲೇಟರ್ ಗಳಿಂದ 50-60 ಲಕ್ಷ ರೂ.ಮೌಲ್ಯದ ವೆಂಟಿಲೇಟರ್‍ಗಳನ್ನು ಖರೀದಿ ಮಾಡಲಾಗಿದೆ. ಬರೀ ನಾಲ್ಕು ಲಕ್ಷದ ಬೆಲೆ ಆಧಾರದ ಮೇಲೆ ಮಾತ್ರ ವೆಂಟಿಲೇಟರ್ ಖರೀದಿ ಮಾಡಿಲ್ಲ. ಹಾಗೆಯೇ ಕೇವಲ ಐಸಿಯುನಲ್ಲಿ ಬಳಕೆಯಾಗುವ ವೆಂಟಿಲೇಟರ್‍ಗೆ 18 ಲಕ್ಷ ರೂ. ವೆಚ್ಚ ತಗುಲಿದೆ. ಉಪಯೋಗಗಳನ್ನು ಆಧರಿಸಿ ವೆಂಟಿಲೇಟರ್ ಗಳ ಬೆಲೆ ನಿರ್ಧಾರ ವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.