ಬಿತ್ತನೆಯಾದ ಗದ್ದೆಗಳಿಗೆ ನುಗ್ಗಿದ ಕಾಡಾನೆಗಳು : ಅಭ್ಯತ್ ಮಂಗಲದಲ್ಲಿ ವನ್ಯಜೀವಿ ಉಪಟಳ

ಮಡಿಕೇರಿ ಜು.21 : ಬಿತ್ತನೆಯಾದ ಗದ್ದೆಗಳಿಗೆ ಕಾಡಾನೆಗಳು ನುಗ್ಗಿ ಹಾನಿಗೊಳಿಸಿರುವ ಘಟನೆ ಅಭ್ಯತ್ ಮಂಗಲ ಗ್ರಾಮದಲ್ಲಿ ನಡೆದಿದೆ. ಅಂಚೆಮನೆ ಪುಷ್ಪಾವತಿ ಎಂದುವವರ ಗದ್ದೆಯಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ಬಿತ್ತನೆ ಮಾಡಲಾಗಿತ್ತು. ಆದರೆ ಇಂದು ಏಕಾಏಕಿ ಕಾಡಾನೆಗಳು ನುಗ್ಗಿದ ಪರಿಣಾಮ ಗಜಹೆಜ್ಜೆಗಳಿಂದ ಸಂಪೂರ್ಣವಾಗಿ ನಾಶವಾಗಿದೆ. ಗ್ರಾಮದಲ್ಲಿ ಆತಂಕದ ವಾತಾವರಣ ಮೂಡಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ವನಪಾಲಕ ಕೂಡಕಂಡಿ ಸುಬ್ರಾಯ, ಸಿಬ್ಬಂದಿಗಳಾದ ಚರಣ್ ಕುಮಾರ್, ವಾಸು, ಜಗದೀಶ್, ಅಪ್ಪುಸ್ವಾಮಿ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
ಒಂದೆಡೆ ಪ್ರಾಕೃತಿಕ ವಿಕೋಪ ಮತ್ತು ವನ್ಯಜೀವಿಗಳ ದಾಳಿಯಿಂದ ಬೇಸತ್ತು ಕೊಡಗಿನ ಕೃಷಿಕರು ಭತ್ತ ಬೆಳೆಯುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಇನ್ನೂ ಕೆಲವರು ಮೂಲ ಕೃಷಿ ಪದ್ಧತಿಯನ್ನು ಬಿಡಲಾಗದೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದರ ನಡುವೆಯೇ ಕಾಡಾನೆಗಳು ಹಾನಿ ಉಂಟು ಮಾಡುತ್ತಿದ್ದು, ಅಳಿದುಳಿದ ಕೃಷಿಕರು ಕೂಡ ಕೃಷಿ ಕಾರ್ಯವನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
