ಶಾಸಕರ ರಾಜೀನಾಮೆಗೆ ಕೊಡಗು ಜೆಡಿಎಸ್ ಒತ್ತಾಯ

July 21, 2020

ಮಡಿಕೇರಿ ಜು.21 : ಸಂಕಷ್ಟವನ್ನು ಎದುರಿಸುತ್ತಿರುವ ಕೊರೋನಾ ಸೋಂಕಿತರು ಹಾಗೂ ಸೀಲ್ ಡೌನ್ ಪ್ರದೇಶಗಳ ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಮಾಣಿಕವಾಗಿ ಸ್ಪಂದಿಸಲು ಸಾಧ್ಯವಾಗದಿದ್ದಲ್ಲಿ ಜಿಲ್ಲೆಯ ಶಾಸಕರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಈ ಹಂತದಲ್ಲಿ ಶ್ರೀಸಾಮಾನ್ಯರಲ್ಲಿ ಧೈರ್ಯ ತುಂಬಿ, ಅಗತ್ಯ ಸೌಲಭ್ಯಗಳನ್ನು ಕಲ್ಪಸಿಕೊಡುವಲ್ಲಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಸೀಲ್ ಡೌನ್ ಪ್ರದೇಶಗಳಲ್ಲಿರುವ ಜನರ ಅಗತ್ಯತೆಗಳನ್ನು, ಸಂಕಷ್ಟಗಳನ್ನು ಗಮನಿಸಿ ಸೂಕ್ತ ಸ್ಪಂದನ ನೀಡುವ ಕಾರ್ಯ ಶಾಸಕರುಗಳಿಂದ ನಡೆಯುತ್ತಿಲ್ಲವೆಂದು ಟೀಕಿಸಿದರು.
ಜಿಲ್ಲೆಯ ಶಾಸಕರುಗಳು ಸೀಲ್ ಡೌನ್ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಲಿ, ಇದು ಸಾಧ್ಯವಾಗದಿದ್ದಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಸೋಂಕಿತ ವ್ಯಕ್ತಿಯನ್ನು ಮನೆಗೆ ಕಳುಹಿಸಿ ಕ್ವಾರಂಟೈನ್‍ಗೆ ಸೂಚಿಸಿ, ಆತನಿರುವ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ನಂತರದ ಅವಧಿಯಲ್ಲಿ ಆ ಪ್ರದೇಶದ ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯದಿಂದ ಜಿಲ್ಲಾಡಳಿತ ನುಣುಚಿಕೊಳ್ಳುತ್ತಿದೆ. ಸಾಕಷ್ಟು ಸೀಲ್ ಡೌನ್ ಪ್ರದೇಶಗಳಲ್ಲಿ ಸಣ್ಣ ರೈತರು, ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಇಂತಹ ಬಡ ಮಂದಿಯ ಪರಿಸ್ಥಿತಿಗಳನ್ನು ಅರಿಯುವ ಪ್ರಯತ್ನ ಆಡಳಿತ ವ್ಯವಸ್ಥೆಯಿಂದ ನಡೆಯುತ್ತಿಲ್ಲ. ಕೊರೊನಾ ಸಂಕಷ್ಟದಿಂದ ನಾವು ಪಾರಾಗಬೇಕಾದರೆ ಜಿಲ್ಲೆಯ ಜನರು, ಜನಪ್ರತಿನಿಧಿಗಳು, ಆಡಳಿತ ವ್ಯವಸ್ಥೆ ಒಂದಾಗಿ ಕಾರ್ಯನಿರ್ವಹಿಸುವ ಅಗತ್ಯತೆ ಇದೆ ಎಂದು ಗಣೇಶ್ ಅಭಿಪ್ರಾಯಪಟ್ಟರು.
ಕೊರೊನಾ ನಿರ್ವಹಣೆಯ ಅವ್ಯವಸ್ಥೆ ಮತ್ತು ಜನರ ಸಂಕಷ್ಟಗಳ ಬಗ್ಗೆ ಪ್ರಶ್ನಿಸಿದಲ್ಲಿ, ಮೊಕದ್ದಮೆಗಳನ್ನು ದಾಖಲಿಸುವ ಮೂಲಕ ಪ್ರಶ್ನಿಸುವ ಹಕ್ಕನ್ನೆ ಸರ್ಕಾರ ಕಸಿದುಕೊಳ್ಳುತ್ತಿದೆ ಎಂದು ಟೀಕಿಸಿದರು.
::: ಉಸ್ತುವಾರಿ ಸಚಿವರು ಬೇಡ :::
ಕೊರೊನಾ ಮಹಾಮಾರಿ ವ್ಯಾಪಿಸುತ್ತಿರುವ ಈ ಹಂತದಲ್ಲಿ ಜಿಲ್ಲೆಯ ಜನರ ಸಂಕಷ್ಟಗಳಿಗೆ ಸಂದಿಸುವ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಗೆ ಆಗಮಿಸಿ ಸಭೆಗಳನ್ನು ನಡೆಸಿ ತೆರಳುತ್ತಿದ್ದಾರೆಯೇ ಹೊರತು ಅವರಿಂದ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಇಂತಹ ಉಸ್ತುವಾರಿ ಸಚಿವರು ಕೊಡಗಿಗೆ ಅಗತ್ಯವಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಜಿಲ್ಲಾಡಳಿತಕ್ಕೆ ಜಿಲ್ಲೆಯ ಸಂಪೂರ್ಣ ಉಸ್ತುವಾರಿಯನ್ನು ನೀಡಲಿ ಎಂದು ಒತ್ತಾಯಿಸಿದರು.
ಈ ಹಿಂದೆ ಮೈತ್ರಿ ಸರ್ಕಾರವಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಾ.ರಾ.ಮಹೇಶ್ ಅವರು ಜನಪರ ಕಾಳಜಿಯಿಂದ ಕಾರ್ಯ ನಿರ್ವಹಿಸಿದ್ದರು ಎಂದರು.
ಜಿಲ್ಲೆಯ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳಿಲ್ಲದೆ, ಜನರಿಗೆ ಆರೋಗ್ಯ ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿಲ್ಲ. ಚೆಟ್ಟಳ್ಳಿಯ ಆರೋಗ್ಯ ಕೇಂದ್ರದಲ್ಲಿರುವ ಆಯುರ್ವೇದಿಕ್ ವೈದ್ಯರು, ಕೇಂದ್ರಕ್ಕೆ ಬರುವವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವುದಕ್ಕೆ ಬದಲಾಗಿ ಮಾರು ದೂರದಿಂದಲೆ ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಕೊಡ್ಲಿಪೇಟೆ ವಿಭಾಗದಲ್ಲು ವೈದ್ಯರ ಕೊರತೆ ಇದೆ ಎಂದು ತಿಳಿಸಿದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಕೊರೊನಾ ಸೋಂಕಿನ ಸಂಕಷ್ಟದ ಈ ದಿನಗಳಲ್ಲಿ ಕೊರೊನೇತರ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರೆಯದ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಕೊರೊನೇತರ ಕಾಯಿಲೆಗಳಿಗೆ ಚಿಕಿತ್ಸೆ ದೊರಕುತ್ತಿಲ್ಲ. ಇತ್ತೀಚೆಗೆ ಸುಂಟಿಕೊಪ್ಪದ ಯುವತಿಯೊಬ್ಬಳನ್ನು ಅಶ್ವಿನಿ ಆಸ್ಪತ್ರೆಗೆ ಕರೆ ತಂದ ಸಂದರ್ಭ ಆಕೆಯನ್ನು ಮೂರು ನಾಲ್ಕು ಬಾರಿ ಕೋವಿಡ್ ಆಸ್ಪತ್ರೆ ಮತ್ತು ಅಶ್ವಿನಿ ಆಸ್ಪತ್ರೆಗೆಂದು ಅಲೆದಾಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಸುನಿಲ್, ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಲ್ಲಚಂಡ ಗೌತಮ್ ಹಾಗೂ ವೀರಾಜಪೇಟೆ ನಗರಾಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.