ಮರ ಬಿದ್ದು ಬೈಕ್ ಸವಾರನಿಗೆ ಗಾಯ : ಕುಂಬೂರು ಬಳಿ ಘಟನೆ

July 21, 2020

ಮಡಿಕೇರಿ ಜು.21 : ಮಡಿಕೇರಿಯಿಂದ ಸೋಮವಾರಪೇಟೆ ಕಡೆಗೆ ತೆರಳುವ ಕುಂಬೂರು ಬಳಿ ರಸ್ತೆ ಬದಿಯಲ್ಲಿ ಒಣಗಿ ನಿಂತಿದ್ದ ಮರವೊಂದು ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದು, ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ.
ಕುಂಬೂರು ನಿವಾಸಿ ದೀಪಕ್ ಎಂಬವರೇ ಗಾಯಗೊಂಡ ವ್ಯಕ್ತಿಯಾಗಿದ್ದು, ಮಡಿಕೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ದೀಪಕ್ ಎಂಬವರ ಕೈ ಮತ್ತು ಮಂಡಿಗೂ ಗಾಯಗಳಾಗಿದ್ದು, ಬೈಕ್‍ಗೂ ಹಾನಿಯಾಗಿದೆ. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ಮತ್ತು ತಂತಿ ಮುರಿದು ಬಿದ್ದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಮಳೆಗಾಲಕ್ಕೂ ಮೊದಲೇ ರಸ್ತೆ ಬದಿಯಲ್ಲಿ ಒಣಗಿ ನಿಂತಿರುವ ಮರಗಳನ್ನು ತೆರವು ಮಾಡಬೇಕೆಂದು ಸಾರ್ವಜನಿಕರು ಈ ಹಿಂದೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿರುವ ಕಾರ್ಮಿಕ ಸಂಘಟನೆಯ ಮುಖಂಡ ಹೆಚ್.ಎಂ.ಸೋಮಪ್ಪ ಹಾಗೂ ಸ್ಥಳೀಯರು ಗಾಯಾಳು ದೀಪಕ್ ಗೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

error: Content is protected !!