ಪತ್ರಕರ್ತರೊಂದಿಗೆ ಆಲ್ ಲೈನ್ ಸಂವಾದ

21/07/2020

ಮಡಿಕೇರಿ ಜು.21 : ಎಸ್.ಕೆ‌.ಎಸ್.ಎಸ್.ಎಫ್ ,‌ಜಿಸಿಸಿ ಕೊಡಗು ಘಟಕ‌ ಇವರ ಆಶ್ರಯದಲ್ಲಿ ಕೊಡಗಿನ ಅನಿವಾಸಿ ಕನ್ನಡಿಗರು‌ ಹಾಗೂ ಕೊಡಗಿನ ಪತ್ರಕರ್ತರೊಂದಿಗೆ ಆನ್ ಲೈನ್ ಸಂವಾದ ಕಾರ್ಯಕ್ರಮ ನಡೆಯಿತು.

ಪತ್ರಿಕಾ ಧರ್ಮ ಮತ್ತು ಪತ್ರ ಕರ್ತರ ಸವಾಲು” ಎಂಬ ವಿಷಯದ‌ ಕುರಿತು ಚರ್ಚೆ, ಸಂವಾದ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಎಸ್.ಕೆ.ಎಸ್.ಎಸ್‌.ಎಫ್ ,ಜಿಸಿಸಿ ಕೊಡಗಯ ಸಮಿತಿಯ ಅಧ್ಯಕ್ಷರಾದ ಹುಸೇನ್ ಫೈಜಿ ಬಜೆಗುಂಡಿ ವಹಿಸಿದ್ದರು.
ಉದ್ಘಾಟನೆಯನ್ನು ನೆರವೇರಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಹುಸೇನ್ ಫೈಜಿ,‌ಪತ್ರಿಕಾ ಧರ್ಮ ಹಾಗೂ ಪತ್ರ ಕರ್ತರ ಸವಾಲುಗಳ ಬಗ್ಗೆ ಬೆಳಕು ಚೆಲ್ಲುವ ಮಾತುಗಳನ್ನು ಆಡಿ ಪತ್ರಕರ್ತರು ಹಾಗೂ ಸಮಾಜದ ನಡುವೆ ಉತ್ತಮ ಸಂಬಂಧ ಇದ್ದಲ್ಲಿ ಮಾತ್ರ, ದೇಶ ಉತ್ತಮ ಹಾದಿಯಲ್ಲಿ ಸಾಗಲು ಸಾಧ್ಯ. ಹಾಗೂ ಎಲ್ಲರೂ ಸಹಕಾರ ನೀಡಿದ್ದಲ್ಲಿ ಮಾತ್ರವೇ ಪತ್ರಿಕಾ ರಂಗ ಪ್ರಬುದ್ಧವಾಗಿ ನೆಲೆಯೂರಲು ಸಾಧ್ಯ ಎಂದು ಹೇಳಿದರು.ಹಾಗೂ ನೈಜ ವರದಿ ಮಾಡುವ ಪತ್ರಕರ್ತರನ್ನು ಪ್ರಶಂಸಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಕರ್ತರು ಮತ್ತು ಸಮಾಜದ ಮಧ್ಯೆ ಇರುವ ಸಂಶಯಗಳನ್ನು ನಿವಾರಿಸುವ ಬಗ್ಗೆ ವಿವರಿಸಿದರು.
ಸಮಾಜ ಜಾಗೃತಿ ಆಗಿ, ಪತ್ರಕರ್ತರು ಉತ್ತಮ ಕೆಲಸ ಮಾಡಿದಾಗ ಬೆನ್ನುತಟ್ಟಿ, ತಪ್ಪುಗಳಾದಾಗ ತಿದ್ದುವ ಪ್ರಯತ್ನ ಮಾಡಿದಾಗ ಮಾತ್ರವೇ ಸಮಾಜವು ನೈಜ ಹಾದಿಯಲ್ಲಿ ಸುಗಮವಾಗಿ ಸಾಗಲು ಸಾಧ್ಯ ಎಂದು ಹೇಳಿದರು. ಹಾಗೆಯೇ ಯುವ ಸಮುದಾಯವು ಹೆಚ್ಚು ಹೆಚ್ಚಾಗಿ ಪತ್ರಿಕಾ ರಂಗಕ್ಕೆ ಬರಲು ಅವರು ಕರೆ ನೀಡಿದರು. ಹಾಗೆಯೇ ಪತ್ರಿಕಾ ರಂಗದಲ್ಲಿ ಆಸಕ್ತಿ ಇರುವವರಿಗೆ ಉತ್ತಮ ಅವಕಾಶ ಕಲ್ಪಿಸಿ ಕೊಡುವ ಭರವಸೆ ನೀಡಿದರು. ಹಾಗೆಯೇ ಸರಕಾರದ ಮೇಲೆ ಒತ್ತಡ ಹೇರಿ ಪತ್ರಿಕಾ ಕಾಲೇಜುಗಳ ಅಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿಕೆ ನೀಡಿದರು. ಹಲವಾರು ಅನಿವಾಸಿ ಕೊಡಗಿನ ನಾಗರಿಕರ ಪತ್ರಿಕೋದ್ಯಮದ ಬಗೆಗಗಿನ ಪ್ರಶ್ನೆಗಳಿಗೆ ಕುಟ್ಟಪ್ಪನವರು ಉತ್ತರಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಖ್ ದಾರಿಮಿ ಪತ್ರಕರ್ತರ ಸಂಕಷ್ಟಕ್ಕೆ ಎಲ್ಲರೂ ಧ್ವನಿಗೂಡಿಸಿ, ಹಾಗೂ ಪತ್ರಿಕಾ ರಂಗದ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸೌದಿ ಅರೇಬಿಯಾ, ಯು.ಎ.ಇ,ಒಮಾನ್, ಬಹರೈನ್, ಕತಾರ್, ಇನ್ನಿತರ ದೇಶಗಳಲ್ಲಿ ಇರುವ ಕೊಡಗಿನ ನೂರಾರು ನಾಗರಿಕರು ಆನ್ ಲೈನ್ ಸಂವಾದದಲ್ಲಿ ಭಾಗವಹಿಸಿದ್ದರು. ಎಸ್.ಕೆ.ಎಸ್.ಎಸ್.ಎಫ್, ಜಿಸಿಸಿ ಆಡಳಿತ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಯಹ್ಯಾ ಕಾರ್ಯಕ್ರಮವನ್ನು ನಿರೂಪಿಸಿ, ಗಫೂರ್ ಸೌದಿ ವಂದಿಸಿದರು.