ಮಡಿಕೇರಿಯಲ್ಲಿ ಕೋವಿಡ್-19 ನಿಯಂತ್ರಣ ತರಬೇತಿ ಕಾರ್ಯಾಗಾರ

21/07/2020

ಮಡಿಕೇರಿ ಜು.21 : ಕೋವಿಡ್-19 ನಿಯಂತ್ರಿಸುವಲ್ಲಿ ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳು ಶ್ರಮಿಸುತ್ತಿದ್ದು, ಈ ಸಂಬಂಧ ಮತ್ತಷ್ಟು ಎಚ್ಚರಿಕೆ ವಹಿಸುವಲ್ಲಿ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ನಗರದ ನಗರಸಭೆ ಕೌನ್ಸಿಲಿಂಗ್ ಸಭಾಂಗಣದಲ್ಲಿ ನಡೆದ ಕಾರ್ಯಗಾರದಲ್ಲಿ ಪೌರಾಯುಕ್ತರಾದ ಶ್ರೀನಿವಾಸ್ ಅವರು ಮಾತನಾಡಿ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆ ಇಲಾಖೆ ವತಿಯಿಂದ ಕೋವಿಡ್-19 ಸಂಬಂಧ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಉಸ್ತುವಾರಿಯಲ್ಲಿ ಬಿಎಲ್‍ಒ, ನಗರಸಭೆ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘಗಳನ್ನೊಳಗೊಂಡ ತಂಡವನ್ನು ಪ್ರತಿ ವಾರ್ಡ್‍ನಲ್ಲಿಯೂ ಸಿದ್ಧಪಡಿಸಿದ್ದು, ಈಗಾಗಲೇ ಕೋವಿಡ್-19 ನಿಯಂತ್ರಣ ಸಂಬಂಧ ಈ ತಂಡಗಳು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪ್ರತೀ ವಾರ್ಡ್‍ನಲ್ಲಿ ರಚನೆಯಾದ ಈ ತಂಡವು, ಸಂಬಂಧಪಟ್ಟ ವಾರ್ಡ್‍ನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಂತಹ ಸಂದರ್ಭ ಅದನ್ನು ನಿರ್ವಹಿಸಲಿದೆ. ಅಲ್ಲದೆ ಸಣ್ಣ-ಪುಟ್ಟ ಸಮಸ್ಯೆಗಳನ್ನೂ ಸಹ ಸ್ಥಳೀಯವಾಗಿಯೇ ಬಗೆಹರಿಸಿಕೊಂಡು ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ವೃದ್ಧರು ಮತ್ತು ಅನಾರೋಗ್ಯ ಪೀಡಿತರ ವಿವರವನ್ನು ಸಹ ಸಂಗ್ರಹಿಸಲಿದೆ. ಒಟ್ಟಾರೆ 120 ಜನರು ಪ್ರತ್ಯೇಕ ತಂಡಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕೋವಿಡ್-19 ಬಗ್ಗೆ ಭಯ ಬೇಡ ಎಚ್ಚರಿಕೆ ಇರಲಿ ಎಂಬ ಸಂದೇಶದಡಿ ಪ್ರತೀ ವಾರ್ಡ್‍ನಲ್ಲಿಯೂ ಸಹ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ ಮತ್ತು ಅದರ ಮಹತ್ವ, ವೈಯಕ್ತಿಕ ಶುಚಿತ್ವ, ಸ್ಯಾನಿಟೈಸರ್ ಬಳಕೆ ಮತ್ತು ಅತೀ ಮುಖ್ಯವಾಗಿ ಮಾಸ್ಕ್ ಧಾರಣೆಯ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಮೂಲಕ ಕೋವಿಡ್-19 ಸಂಬಂಧ ಸಾರ್ವಜನಿಕರಲ್ಲಿನ ಗೊಂದಲ ಮತ್ತು ಭಯ ನಿವಾರಿಸುವ ಮತ್ತು ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ಪೌರಾಯುಕ್ತರು ತಿಳಿಸಿದರು.
ರಾಜ್ಯ ಮಟ್ಟದಲ್ಲಿ ಆನ್‍ಲೈನ್ ಮೂಲಕ ತರಬೇತಿ ಕಾರ್ಯಗಾರ ನಡೆಸಲಾಗಿದೆ. ಈ ತರಬೇತಿಯಲ್ಲಿ 4 ನಗರ ಸ್ಥಳೀಯ ಸಂಸ್ಥೆಯ ಉಸ್ತುವಾರಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಇತರರು ಭಾಗಿಯಾಗಿ ತರಬೇತಿ ಪಡೆದುಕೊಂಡಿದ್ದಾರೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಪಾಸಿಟಿವ್ ಪ್ರಕರಣ ಬಂದಂತಹ ಸಂದರ್ಭದಲ್ಲಿ ಅಂತಹ ಕಟ್ಟಡವನ್ನೂ ಸಹ ಸ್ಯಾನಿಟೈಸೇಶನ್ ಮಾಡುವ ಕಾರ್ಯನಿರ್ವಹಣೆ. ಕೋವಿಡ್-19 ಸೋಂಕಿನಿಂದ ಮೃತರಾದವರ ಶವಸಂಸ್ಕಾರ ಸಂದರ್ಭದಲ್ಲಿಯೂ ನಗರಸಭೆಯ ಪೌರಕಾರ್ಮಿಕರು ತೊಡಗಿಸಿಕೊಂಡಿದ್ದಾರೆ ಎಂದು ಪೌರಾಯುಕ್ತರಾದ ಶ್ರೀನಿವಾಸ್ ಅವರು ತಿಳಿಸಿದರು.

ಇದರೊಂದಿಗೆ ಮಳೆಗಾಲ ನಿರ್ವಹಣೆ ಸಂಬಂಧ ಮಾಹಿತಿ ನೀಡಿ, ನಗರಸಭೆಯಲ್ಲಿ 24*7 ಕಂಟ್ರೋಲ್ ರೂಂ ಕಾರ್ಯನಿರ್ವಹಿಸಲಿದೆ. ಮಳೆಗಾಲವನ್ನು ಸಮರ್ಥವಾಗಿ ನಿಭಾಯಿಸಲು ನಗರಸಭೆ ಸಜ್ಜಾಗಿದೆ ಎಂದು ಶ್ರೀನಿವಾಸ್ ತಿಳಿಸಿದರು.