ಪೊಲೀಸರಿಗೆ ನೀತಿ ಸಂಹಿತೆ ಜಾರಿ

22/07/2020

ಅಹಮದಾಬಾದ್ ಜು.22 : ಡಿಜಿಪಿ ಶಿವಾನಂದ್ ಝಾ ಹೊರಡಿಸಿದ ಆದೇಶದನ್ವಯ ಗುಜರಾತ್‍ನ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಯಾರೂ ಸಾಮಾಜಿಕ ತಾಣದಲ್ಲಿ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದು ಅಥವಾ ಯಾವುದೇ ಸರ್ಕಾರಿ ವಿರೋಧಿ ಬರಹ ಪ್ರಕಟಿಸಬಾರದು ಎಂದು ನಿರ್ದೇಶಿಸಲಾಗಿದೆ. ಇದು ದೇಶದ ಮೊಟ್ಟ ಮೊದಲ ಸಾಮಾಜಿಕ ತಾಣಗಳ ಮೇಲಿನ ನೀತಿ ಸಂಹಿತೆ ಎಂದು ಹೇಳಲಾಗಿದೆ.
ರಾಜ್ಯದ ಪೊಲೀಸ್ ಸಿಬ್ಬಂದಿಯ ವೇತನ ಹೆಚ್ಚಳಕ್ಕಾಗಿ ಆನ್‍ಲೈನ್ ಅಭಿಯಾನ ಪ್ರಾರಂಬವಾದ ನಂತರ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಇದು ಫೇಸ್‍ಬುಕ್ ಮತ್ತು ಟ್ವಿಟರ್‍ನಂತಹ ವೇದಿಕೆಗಳಲ್ಲಿ ಭಾರಿ ಪ್ರತಿಕ್ರಿಯೆಗಳನ್ನು ಪಡೆದಿದೆ.
ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ವಿಷಯಗಳನ್ನು ಮುದ್ರಿಸಲು ಅಥವಾ ಪ್ರಕಟಿಸಲು ನಿಷೇಧಿಸಲಾಗಿದ್ದರೂ, ಸಾಮಾಜಿಕ ಮಾಧ್ಯಮಗಳ ಬಳಕೆಗೆ ಸಂಬಂಧಿಸಿದಂತೆ ಇಂತಹ ವಿವರವಾದ ನೀತಿ ಸಂಹಿತೆಯನ್ನು ಅವರಿಗೆ ನೀಡಲಾಗುತ್ತಿರುವುದು ಇದೇ ಮೊದಲು.