ಗಡಿಯಲ್ಲಿ ಭಾರತ್ ಡ್ರೋನ್ ಬಳಕೆ

22/07/2020

ನವದೆಹಲಿ ಜು.22 : ಪೂರ್ವ ಲಡಾಖ್ ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ(ಎಲ್‍ಎಸಿ) ಬಳಿ ಚೀನಾ ಸೇನೆಯ ಚಲನವಲನದ ಮೇಲೆ ಕಣ್ಣಿಡಲು ಭಾರತೀಯ ಸೇನೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಧೆ(ಡಿಆರ್ಡಿಒ) ನಿರ್ಮಾಣದ ಭಾರತ್ ಡ್ರೋನ್ ಗಳನ್ನು ಬಳಸಿಕೊಳ್ಳುತ್ತಿದೆ.
ಗಡಿಯಲ್ಲಿ ಚೀನಾ ಸೇನೆ ತಂಟೆ ಮಾಡುತ್ತಿರುವುದರಿಂದ ವಿವಾದಿತ ಪ್ರದೇಶಗಳಲ್ಲಿ ನಿಖರವಾದ ಕಣ್ಗಾವಲು ನಡೆಸಲು ಭಾರತೀಯ ಸೇನೆಗೆ ಡ್ರೋನ್ ಗಳ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಡಿಆರ್ಡಿಒ ನಿರ್ಮಿಸಿದ್ದ ಡ್ರೋನ್ ಗಳಿಗೆ ಭಾರತ್ ಎಂದು ಹೆಸರಿಡಲಾಗಿದ್ದು ಅವುಗಳನ್ನು ಸೇನೆಗೆ ಹಸ್ತಾಂತರಿಸಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
ವಿಶ್ವದ ಅತ್ಯಂತ ಚುರುಕುಬುದ್ಧಿಯ ಮತ್ತು ಹಗುರ ಕಣ್ಗಾವಲು ಡ್ರೋನ್ ಗಳ ಪಟ್ಟಿಗೆ ಭಾರತ್ ಸರಣಿಯ ಡ್ರೋನ್ ಗಳನ್ನು ಸೇರಿಸಬಹುದಾಗಿದೆ. ಈ ಭಾರತ್ ಡ್ರೋನ್ ಸಣ್ಣ ಹಾಗೂ ಶಕ್ತಿಯುತವಾದ ಡ್ರೋನ್ ಆಗಿದ್ದು ಸ್ಥಳದಲ್ಲಿ ನಿಖರವಾಗಿ ಕಾರ್ಯ ನಿರ್ವಹಿಸಬಲ್ಲದು. ಮಿತ್ರರು ಹಾಗೂ ವೈರಿಗಳನ್ನು ಪತ್ತೆ ಹಚ್ಚಲು ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದೆ. ಅದಕ್ಕೆ ಅನುಗುಣವಾಗಿ ಈ ಡ್ರೋನ್ ಕಾರ್ಯ ನಿರ್ವಹಿಸುತ್ತದೆ.