ಕರ್ನಾಟಕದ ಸುಂದರ ಕಡಲ ತೀರ ಮರವಂತೆ

ಮರವಂತೆಯು ಪಶ್ಚಿಮ ಕರಾವಳಿಯಲ್ಲಿರುವ ಒಂದು ಪುಟ್ಟ ಹಳ್ಳಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ, ತಾಲೂಕು ಕೇಂದ್ರದಿಂದ ೨೦ ಕಿ.ಮೀ.ದೂರದಲ್ಲಿದೆ. ಈ ಹಳ್ಳಿಯ ಮೂಲಕ ರಾಷ್ಟ್ರೀಯ ಹೆದ್ದಾರಿಯು ಹಾದುಹೋಗಿದ್ದರೂ, ಊರಿನ ಅಭಿವೃದ್ದಿಗೆ ಅದರಿಂದೇನೂ ಉಪಯೋಗವಾದಂತಿಲ್ಲ.
ಸಮುದ್ರ ತೀರ :
ನದಿ ಮತ್ತು ಸಮುದ್ರ ತೀರ ಹತ್ತಿರ ಬಂದರೂ, ಒಂದಾಗದೇ ದೂರಸಾಗುವ ಅಪರೂಪದ ಭೌಗೋಳಿಕ ಸ್ಥಳ ಇದು. ಮಧ್ಯ ರಾಷ್ಟ್ರೀಯ ಹೆದ್ದಾರಿಯು ಹಾದುಹೋಗಿದ್ದು, ಭಾರತದಲ್ಲಿ ಇಂತಹ ಇನ್ನೊಂದು ದೃಶ್ಯ ಇಲ್ಲ ಎನ್ನಲಾಗಿದೆ.
ಬಹಳ ಪ್ರಸಿದ್ಧವಾದ ಬೀಚ್‌ಗಳಲ್ಲಿ ಒಂದಾಗಿದ್ದು, ಕುಂದಾಪುರದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಹೆದ್ದಾರಿಯ ಎರಡು ಇಕ್ಕೆಲಗಳಲ್ಲಿರುವ ಈ ಬೀಚ್ ಪ್ರವಾಸಿಗರಿಗೆ ಹಾಗೆಯೇ ಉಡುಪಿ-ಕುಂದಾಪುರ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಸದೌತಣವನ್ನು ನೀಡುವುದರಲ್ಲಿ ಎರಡು ಮಾತಿಲ್ಲ.
ಮರವಂತೆ ಬೀಚ್ ಒಂದು ಉತ್ತಮ ಪಿಕ್ನಿಕ್ ಸ್ಪಾಟ್ ಆಗಿದ್ದು, ಮೈಲುಗಳಷ್ಟು ಬಿಳಿ ಮರಳನ್ನು ಹೊಂದಿರುವ ಸುಂದರವಾದ ಬೀಚ್ ಪಟ್ಟಣವಾಗಿದೆ, ಈ ಬೀಚ್‌ನ್ನು ವರ್ಜಿನ್ ಬೀಚ್ ಎಂದೂ ಅಡ್ಡಹೆಸರಿನಿಂದ ಕರೆಯಲಾಗುತ್ತದೆ.
ಒಂದೆಡೆ ನದಿ, ಇನ್ನೊಂದೆಡೆ ಸಮುದ್ರ. ಅದರಲ್ಲೂಸೂರ್ಯಾಸ್ತಮಾನದ ಸುಂದರ ದೃಶ್ಯವನ್ನು ಕಣ್ಣು ತುಂಬಿಕೊಳ್ಳಬೇಕು ಎಂದರೆ ಮರವಂತೆಗೆ ಭೇಟಿ ನೀಡಬೇಕು. ಸೂರ್ಯಾಸ್ಥಕ್ಕೆ ಖ್ಯಾತವಾಗಿರುವ ಇದು ಉಡುಪಿಯಿಂದ 52 ಕಿ.ಮೀ. ದೂರದಲ್ಲಿದೆ. ಕುಂದಾಪುರದಿಂದ 18 ಕಿ.ಮೀ. ದೂರದಲ್ಲಿದೆ.
