ಬೇವಿನ ಎಲೆಯ ಔಷಧೀಯ ಗುಣ

22/07/2020

ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬೇವಿನ ಮರಕ್ಕೆ ಬಹಳ ವಿಶೇಷ ಸ್ಥಾನ ಒದಗಿಸಲಾಗಿದೆ. ಅದರಲ್ಲಿರುವ ಉತ್ತಮ ಔಷಧೀಯ ಗುಣಗಳಿಂದ ಎಲ್ಲರಲ್ಲೂ ಪೂಜನೀಯ ಭಾವನೆ ಉಂಟಾಗುತ್ತದೆ. ಅದಕ್ಕೆ ಕಾರಣ ಬೇವಿನ ಪ್ರತಿಯೊಂದು ಭಾಗವೂ ಸಹ ಮನುಷ್ಯನಿಗೆ ಉಪಯೋಗಕ್ಕೆ ಬರುತ್ತದೆ. ಬೇವಿನ ಎಲೆಗಳು, ಬೇವಿನ ಚಕ್ಕೆ, ಬೇವಿನ ಮರದ ಬೇರು, ಬೇವಿನ ಕಡ್ಡಿ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮನುಷ್ಯನ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಬೇವು ರಾಮಬಾಣವಾಗಿದೆ. ಚರ್ಮ ರೋಗಗಳು ಕೂದಲಿನ ಸಮಸ್ಯೆಗಳು ಮತ್ತು ದೇಹದ ಆಂತರಿಕ ಆರೋಗ್ಯ ಸಮಸ್ಯೆಗಳು ಬೇವಿನಿಂದ ಗುಣ ಕಾಣುತ್ತವೆ.

ರಕ್ತ ಶುದ್ಧೀಕರಣದಲ್ಲಿ ಸಹಾಯಕ : ಬೇವಿನ ಎಲೆಗಳಿಂದ ಪಡೆದ ಬೇವಿನ ರಸ ಮನುಷ್ಯನ ದೇಹದ ರಕ್ತವನ್ನು ಶುದ್ಧಗೊಳಿಸಿ ಒಂದು ಔಷಧಿಯ ರೂಪದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವೆಂದು ಪರಿಗಣಿಸಿದ ‘ ಎಲ್ ಡಿ ಎಲ್ ‘ ಅಥವಾ ‘ ಲೋ ಡೆನ್ಸಿಟಿ ಲಿಪೊಪ್ರೋಟೀನ್ ‘ ಅನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತದೆ. ಇದರಿಂದ ಹೃದಯದ ತೊಂದರೆಗಳು ದೂರಾಗುತ್ತವೆ. ರಕ್ತ ಶುದ್ಧಿ ಆಗುವುದರಿಂದ ದೇಹದಲ್ಲಿ ರಕ್ತ ಸಂಚಾರ ಕೂಡ ಉತ್ತಮಗೊಂಡು ದೇಹದ ಇನ್ನಿತರ ಭಾಗಗಳಿಗೂ ಸರಾಗವಾಗಿ ರಕ್ತ ಹರಿಯುತ್ತದೆ. ರಕ್ತದ ಒತ್ತಡ ಸಹ ನಿಯಂತ್ರಣಕ್ಕೆ ಬರುತ್ತದೆ.

ಮಲೇರಿಯಾ ಮತ್ತು ಜಾಂಡೀಸ್ ಗೆ ರಾಮಬಾಣ : ಬೇವಿನ ಎಲೆಗಳಿಂದ ಹೊರ ತೆಗೆದ ಬೇವಿನ ರಸ ಮಲೇರಿಯಾ ಜ್ವರ ಮತ್ತು ಜಾಂಡಿಸ್ ಸಮಸ್ಯೆಯಿಂದ ಬಳಲುತ್ತಿರುವ ಎಷ್ಟೋ ಜನರಿಗೆ ಬಹಳ ಉಪಯುಕ್ತವಾದ ರೀತಿಯಲ್ಲಿ ಕೆಲಸ ಮಾಡಿದೆ. ಇದರಲ್ಲಿರುವ ಆಂಟಿ – ಬ್ಯಾಕ್ಟರಿಯಲ್ ಗುಣ ಲಕ್ಷಣಗಳು ಮಲೇರಿಯಾ ಜ್ವರಕ್ಕೆ ಕಾರಣವಾದ ವೈರಸ್ ನ ಬೆಳವಣಿಗೆಯನ್ನು ಕುಂಠಿತಗೊಳಿಸಿ ಮನುಷ್ಯನ ದೇಹದ ಲಿವರ್ ಅಂಗಾಂಗವನ್ನು ಬಲವಾಗಿಸುತ್ತದೆ. ಇದೇ ರೀತಿ ಜಾಂಡಿಸ್ ಹೊಂದಿರುವ ರೋಗಿಗಳು ಬೇವಿನ ಎಲೆಗಳ ರಸದೊಂದಿಗೆ ಹಸಿ ಜೇನು ತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿದರೆ ಬಹಳ ಬೇಗನೆ ಪ್ರತಿಫಲ ಕಾಣಬಹುದು.

ದೃಷ್ಠಿಯ ಸಮಸ್ಯೆಗೆ ಸಹಾಯಕ : ಇತ್ತೀಚಿನ ಕಾಲಮಾನದಲ್ಲಿ ಯುವಜನತೆಯಲ್ಲಿ ಹೆಚ್ಚಾದ ಮೊಬೈಲ್ ಬಳಕೆ ಮತ್ತು ಕಂಪ್ಯೂಟರ್ ಬಳಕೆಯಿಂದ ಅತಿ ಹೆಚ್ಚಾಗಿ ಹೊರ ಸೂಸುವ ನೀಲಿ ಬೆಳಕಿನ ಪ್ರಮಾಣದಿಂದ ಬಹಳ ಬೇಗನೆ ಕಣ್ಣುಗಳು ಹಾಳಾಗಿ ದೃಷ್ಠಿಯ ಸಮಸ್ಯೆ ಎದುರಿಸುತ್ತಾರೆ. ಯಾರಲ್ಲೂ ರಾತ್ರಿ ಮಲಗಿದ ಸಮಯದಲ್ಲಿ ಮೊಬೈಲ್ ಬಳಕೆ ಮಾಡುವವರಿಗೆ ಈ ಸಮಸ್ಯೆ ಬಹಳ ಹೆಚ್ಚು. ಕಾಂಜುಂಕ್ಟಿವಿಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಯಾರೇ ಆದರೂ ಬೇವಿನ ನೀರಿನ ಉಪಯೋಗದಿಂದ ಗುಣ ಕಾಣಬಹುದು.

ಸಕ್ಕರೆ ಕಾಯಿಲೆಯಿಂದ ರಕ್ಷಣೆ : ಇತ್ತೀಚಿಗಂತೂ ಮೂರರಲ್ಲಿ ಒಬ್ಬರಿಗೆ ಬಿಟ್ಟೂ ಬಿಡದಂತೆ 40 ವರ್ಷ ವಯಸ್ಸಾದ ನಂತರ ಕಾಡುವ ಆರೋಗ್ಯ ಸಮಸ್ಯೆ ಎಂದರೆ ಅದು ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್. ಮನುಷ್ಯನ ಜೀವನ ಶೈಲಿಯ ವಿಚಿತ್ರ ಬದಲಾವಣೆಯಿಂದ ಇಂತಹ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚು ಮಾಡಿ ಮಧುಮೇಹಕ್ಕೆ ಕಾರಣವಾಗುತ್ತಿದೆ. ಸಾಮಾನ್ಯ ಜನರು ಪ್ರತಿ ದಿನ ಬೇವಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹದಲ್ಲಿನ ಸಕ್ಕರೆ ಪ್ರಮಾಣ ಸೀಮಿತ ಸ್ಥಿತಿ ಕಾಯ್ದುಕೊಂಡು ಮುಂಬರುವ ದಿನಗಳಲ್ಲಿ ಡಯಾಬಿಟಿಸ್ ನಂತಹ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. ಇನ್ನು ಡಯಾಬಿಟಿಸ್ ನಿಂದ ಈಗಾಗಲೇ ಬಳಲುತ್ತಿರುವವರು ಪ್ರತಿ ದಿನ ಬೇವಿನ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಾಮಾನ್ಯ ಸ್ಥಿತಿಗೆ ತಂದು ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಹಲ್ಲುಗಳು ಮತ್ತು ವಸಡುಗಳ ಸಮಸ್ಯೆಯಿಂದ ರಕ್ಷಣೆ : ವಸಡುಗಳ ರಕ್ತ ಸೋರಿಕೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಒಂದು ಟಿಪ್ಸ್ ಅನುಸರಿಸಬಹುದು. ಏನಂದರೆ ಬೇವಿನ ಚಕ್ಕೆ ಅಥವಾ ಬೇವಿನ ಎಲೆಗಳನ್ನು ನೀರಿನಲ್ಲಿ ನೆನೆ ಹಾಕಿ, ಸ್ವಲ್ಪ ಹೊತ್ತಿನ ನಂತರ ಅದನ್ನು ಚೆನ್ನಾಗಿ ರುಬ್ಬಿಕೊಂಡು ವಸಡುಗಳಿಗೆ ಲೇಪನ ಮಾಡಿದರೆ ಹಲ್ಲುಗಳ ಸಂದುಗಳಿಂದ ಮತ್ತು ವಸಡುಗಳಿಂದ ರಕ್ತ ಸೋರಿಕೆ ಆಗುವುದು ನಿಲ್ಲುತ್ತದೆ. ಇನ್ನು ಹಲ್ಲುಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರು ಬೇವಿನ ಮರದ ಹೂವುಗಳ ಡಿಕಾಕ್ಷನ್ ಮಾಡಿ ಕುಡಿಯುವುದರಿಂದ ತಮ್ಮ ಸಮಸ್ಯೆಗಳಿಂದ ಪಾರಾಗಬಹುದು. ಹಲ್ಲುಗಳಲ್ಲಿರುವ ಕೀಟಾಣುಗಳನ್ನು ನಾಶ ಪಡಿಸಲು ಪ್ರತಿ ದಿನ ಬೇವಿನ ಕಡ್ಡಿಗಳಿಂದ ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಬೇಕು. ಒಟ್ಟಾಗಿ ಹೇಳುವುದಾದರೆ, ಬೇವಿನ ಪ್ರತಿಯೊಂದು ವಸ್ತುವೂ ಕೂಡ ಹಲ್ಲುಗಳಿಗೆ ಮತ್ತು ವಸಡುಗಳಿಗೆ ಬಹಳಷ್ಟು ಸಹಕಾರಿಯಾಗಿದೆ.

ಮೊಡವೆಗಳ ಸಮಸ್ಯೆಗೆ ಸಹಾಯಕ : ಬೇವಿನ ನೀರು ಮುಖದ ಮೇಲಿನ ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬಹಳ ದಿನಗಳಿಂದ ಮೊಡವೆಗಳ ಸಮಸ್ಯೆಯಿಂದ ಬಳಲುತ್ತಿರುವವರು ಬೇವಿನ ಎಲೆಗಳ ರಸವನ್ನು ಮುಖದ ಮೇಲೆ ಮೊಡವೆಗಳಿರುವ ಜಾಗಕ್ಕೆ ಹಚ್ಚಿ ಮೊಡವೆಗಳಿಂದ ಗುಣ ಕಾಣಬಹುದು. ಬೇವಿನ ನೀರಿನಿಂದ ಮುಖವನ್ನು ಮಸಾಜ್ ಮಾಡಿದರೆ, ಮುಖದಲ್ಲಿರುವ ತೇವಾಂಶ ಹಾಗೆ ಉಳಿದು ಚರ್ಮದ ಮೃದುತ್ವ ಮತ್ತು ಕಾಂತಿ ಹೆಚ್ಚಾಗುತ್ತದೆ.