ಕರಿಕೆ ಗಡಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಿ : ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರ ಮನವಿ

22/07/2020

ಮಡಿಕೇರಿ ಜು.22 : ಕರಿಕೆ ಗ್ರಾಮದಲ್ಲಿ ಕೊರೋನಾ ಹಿನ್ನೆಲೆ ಮಣ್ಣಿನಿಂದ ಮುಚ್ಚಲಾಗಿರುವ ಕೇರಳದ ಗಡಿ ರಸ್ತೆಯನ್ನು ಗ್ರಾಮಸ್ಥರ ಹಿತದೃಷ್ಟಿಯಿಂದ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಕರಿಕೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗಡಿಭಾಗದಲ್ಲಿ ಕೊರೊನಾ ತಪಾಸಣೆಯನ್ನು ಚುರುಕುಗೊಳಿಸುವುದರೊಂದಿಗೆ ರಸ್ತೆ ಸಂಚಾರಕ್ಕೂ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಕೊಡಗಿನ ಗಡಿ ಗ್ರಾಮ ಕರಿಕೆ ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮಕ್ಕೆ ಹೊಂದಿಕೊಂಡಿದೆ. ಸುಮಾರು ಐದು ಸಾವಿರ ಮಂದಿ ಇರುವ ಗ್ರಾಮದಲ್ಲಿ ಶೇ.70 ರಷ್ಟು ಕಡು ಬಡವರು, ಹಿಂದುಳಿದವರು ವಾಸವಾಗಿದ್ದಾರೆ. ಗ್ರಾಮಸ್ಥರು ದೈನಂದಿನ ಚಟುವಟಿಕೆಗಳಿಗೆ ಹಾಗೂ ತುರ್ತು ಚಿಕಿತ್ಸೆಗೆ ನೆರೆಯ ಕೇರಳದ ಪಾನತ್ತೂರು ಗ್ರಾಮವನ್ನೇ ಅವಲಂಬಿಸಿದ್ದಾರೆ.
ಆದರೆ ಕೊರೊನಾ ಹಿನ್ನೆಲೆ ಸಂಚಾರ ಸಂಪರ್ಕವನ್ನು ಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಅಗತ್ಯ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ಅಲ್ಲದೆ ಜಿಲ್ಲಾ ಕೇಂದ್ರ ಮಡಿಕೇರಿಗೆ ಯಾವುದೇ ಬಸ್ ವ್ಯವಸ್ಥೆ ಇರುವುದಿಲ್ಲ. ಮಳೆಗಾಲದ ಸಂದರ್ಭದಲ್ಲಿ ಭಾಗಮಂಡಲಕ್ಕೆ ಬಂದು ತಲುಪುವುದೇ ದುಸ್ತರವಾಗಿದೆ. ತುರ್ತು ಆರೋಗ್ಯ ಸಮಸ್ಯೆಗಳು ಉಂಟಾದಾಗ ರೋಗಿಯನ್ನು ತಪಾಸಣೆ ಮಾಡಲು ಇಲ್ಲಿನ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆಗಳಿಲ್ಲವೆಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಕಂದಾಯ ಮತ್ತು ಪಂಚಾಯ್ತಿ ಪ್ರತಿನಿಧಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಕೊಡಗು- ಕೇರಳದ ಗಡಿ ರಸ್ತೆಯಲ್ಲಿ ಸಂಚರಿಸುವವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವ ಕ್ರಮ ಕೈಗೊಳ್ಳುವುದರೊಂದಿಗೆ ಗ್ರಾಮಸ್ಥರ ಆರೋಗ್ಯದ ಹಿತದೃಷ್ಟಿಯಿಂದ ಸಂಚಾರ ಸಂಪರ್ಕವನ್ನು ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಗ್ರಾ.ಪಂ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್, ಪ್ರಮುಖರಾದ ಬಿ.ಆರ್.ರಮಾನಾಥ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.