ಪೆಗ್ಗರಿಕಾಡು ಕಾಲೋನಿ ರಸ್ತೆ ಅವ್ಯವಸ್ಥೆ : ಧರಣಿ ಸತ್ಯಾಗ್ರಹದ ಎಚ್ಚರಿಕೆ

22/07/2020

ಮಡಿಕೇರಿ ಜು.22 : ದಶಕಗಳಿಂದ ಡಾಂಬರೀಕರಣ ಕಾಣದೆ ಬೃಹತ್ ಗುಂಡಿಗಳಿಂದ ಆವೃತ್ತವಾಗಿ ಸಂಚಾರಕ್ಕೆ ಅಯೋಗ್ಯವಾಗಿರುವ ಬಿಟ್ಟಂಗಾಲ ಮತ್ತು ಪೆಗ್ಗರಿಕಾಡು ಕಾಲೋನಿಗೆ ಸಂಪರ್ಕ ರಸ್ತೆಯ ದುಸ್ಥಿತಿ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೆಗ್ಗರಿಕಾಡು ಕಾಲೋನಿಯಲ್ಲಿ ಸುಮಾರು 40 ರಿಂದ 50 ಕುಟುಂಬಗಳಿದ್ದು, 200 ಮಂದಿ ವಾಸಿಸುತ್ತಿದ್ದಾರೆ. ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪಾಳುಬಿದ್ದ ರಸ್ತೆಯಲ್ಲೇ ನಿತ್ಯ ಸಂಚರಿಸಬೇಕಾಗಿದೆ. ಕಳೆದ ಹತ್ತು ವರ್ಷಗಳಿಂದ ರಸ್ತೆಗೆ ದುರಸ್ತಿ ಭಾಗ್ಯ ದೊರೆತ್ತಿಲ್ಲ. ಬಡವರ ಕಾಲೋನಿ ಎನ್ನುವ ಕಾರಣಕ್ಕೆ ಈ ರಸ್ತೆ ಅಭಿವೃದ್ಧಿ ಬಗ್ಗೆ ಯಾರಿಗೂ ಕಾಳಜಿ ಇಲ್ಲವೆಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಸಂಸದರು, ಶಾಸಕರು, ಜಿ.ಪಂ, ತಾ.ಪಂ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿದಾಗ ರಸ್ತೆ ಅವ್ಯವಸ್ಥೆ ಬಗ್ಗೆ ಗ್ರಾಮಸ್ಥರು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ದುರಸ್ತಿ ಕಾರ್ಯವನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ ಭರವಸೆ ದೊರೆಯಿತೇ ಹೊರತು ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ. ವಿರಾಜಪೇಟೆ-ಗೊಣಿಕೊಪ್ಪಲು ಪ್ರಮುಖ ರಸ್ತೆಯಿಂದ ಕಾಲೋನಿಗೆ ಒಂದು ಕಿ.ಮೀ. ಅಂತರವಿದೆ. ಆದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿಕೊಂಡಿದ್ದಾರೆ.
ಗ್ರಾಮೀಣ ರಸ್ತೆಗಳ ಆಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೋಟಿ, ಕೋಟಿ ಹಣ ಮಂಜೂರಾಗುತ್ತಿದೆ. ಆದರೆ ಈ ಶಾಪಗ್ರಸ್ತ ರಸ್ತೆಗೆ ಮಾತ್ರ ಅನುದಾನವೇ ವಿನಿಯೋಗವಾಗುತ್ತಿಲ್ಲ. ಕಳೆದ ವರ್ಷ ಬಿದ್ದ ಮಾಹಾಮಳೆಗೆ ರಸ್ತೆಗೆ ಹೊಂದಿಕೊಂಡಿರುವ ಮೋರಿಯ ಒಂದು ಭಾಗ ಕೊಚ್ಚಿ ಹೋಗಿತ್ತು. ಗ್ರಾಮಸ್ಥರ ನೆರವಿನಿಂದ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು. ನಂತರ ಮೋರಿ ಅಭಿವೃದ್ಧಿಗೆ ಗ್ರಾ.ಪಂ ನಿಂದ 5ಲಕ್ಷ ರೂ. ಬಿಡುಗಡೆಗೊಳಿಸಿತು. ಆದರೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಮೋರಿ ಕುಸಿಯುವ ಹಂತ ತಲುಪಿದೆ. ಗ್ರಾ.ಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಭಿವೃದ್ಧಿ ಕಾರ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೇ ಈ ಅವ್ಯವಸ್ಥೆಗಳಿಗೆ ಕಾರಣವೆಂದು ಸ್ಥಳೀಯ ನಿವಾಸಿ ಪಿ.ಎನ್.ವಿನೋದ್ ಆರೋಪಿಸಿದ್ದಾರೆ.
ಅಗತ್ಯ ವಸ್ತುಗಳನ್ನು ತರಲು ಬಾಡಿಗೆ ವಾಹನಗಳಿಗೆ ಹೆಚ್ಚಿನ ದರ ನೀಡಬೇಕಾಗುತ್ತದೆ. ಇತ್ತೀಚೆಗೆ ಗರ್ಭಿಣಿ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲು ಹರಸಾಹಸವೇ ಪಡಬೇಕಾಯಿತು. ಕಾಲೋನಿಗೆ ಹೊಂದಿಕೊಂಡಿರುವ ಅರಣ್ಯದಂಚಿನಲ್ಲಿ ಕಾಡಾನೆಗಳ ಸುಗಮ ಸಂಚಾರದ ವ್ಯವಸ್ಥೆಗಾಗಿ ಗ್ರಾ.ಪಂ ರೂ.5 ಲಕ್ಷವನ್ನು ಬಿಡುಗಡೆ ಮಾಡಿದೆ. ಆದರೆ ಮಾನವರ ಅನುಕೂಲಕ್ಕಾಗಿ ಸುಸಜ್ಜಿತವಾದ ರಸ್ತೆ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡದೆ ನಿರ್ಲಕ್ಷ್ಯ ವಹಿಸಿದೆ ಎಂದು ನಿವಾಸಿ ಅಜಿತ್ ಟಿ.ವಿ. ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಲೋನಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಗೊಣಿಕೊಪ್ಪ- ವಿರಾಜಪೇಟೆ ಪ್ರಮುಖ ರಸ್ತೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
::: ಅನುದಾನ ಬಂದರೆ ಅಭಿವೃದ್ಧಿ :::
ಪೆಗ್ಗರಿಕಾಡು ಕಾಲೋನಿಯಲ್ಲಿ 100 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಡಾಂಬರೀಕರಣ ಮಾಡುವುದು ಗ್ರಾ.ಪಂ ಅಭಿವೃದ್ಧಿ ಕಾಮಗಾರಿಗಳ ವ್ಯಾಪ್ತಿಗೆ ಬರುವುದಿಲ್ಲ. ಜಿ.ಪಂ ಮತ್ತು ತಾ.ಪಂ ಅನುದಾನದ ಅಗತ್ಯವಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಅನುದಾನ ಬಂದರೆ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಗ್ರಾ.ಪಂ ಪಿಡಿಒ ತಿಳಿಸಿದ್ದಾರೆ.