ಬೇಳೂರಿನಲ್ಲಿ ತೋಟದ ಕಾರ್ಮಿಕರಿಗೆ ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಕಾರ್ಯಕ್ರಮ

23/07/2020

ಮಡಿಕೇರಿ ಜು. 23 : ಮೈಸೂರು ಇನ್ನರ್ ವೀಲ್ ಕ್ಲಬ್ (ಉತ್ತರ )ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸೋಮವಾರಪೇಟೆ ಸಮೀಪದ ಬೇಳೂರಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತೋಟ ಕಾರ್ಮಿಕರಿಗೆ ಕೋವಿಟ್ 19 ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಂದಿನಿ ಪ್ರಭುದೇವ್, ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರೊಂದಿಗೆ ಮುಂಜಾಗೃತ ಕ್ರಮಗಳನ್ನು ಕೈಗೊಂಡಲ್ಲಿ ಕೊರೋನ ಸೋಂಕನ್ನು ತಡೆಗಟ್ಟಲು ಸಾಧ್ಯ ಎಂದರು.
ಇದೊಂದು ದುರ್ಬಲ ವೈರಸ್ ಆಗಿದ್ದು, ಬಿಸಿಲಿನ ಬೇಗೆಗೆ 4 ಗಂಟೆಯೋಳಗೆ ಸಾಯುತ್ತದೆ. ಕೊರೋನ ಸೋಂಕಿನಿಂದ ಸಂಭವಿಸುತ್ತಿರುವ ಬಹುತೇಕ ಸಾವುಗಳು ಅಜಾಗರೂಕತೆ ಮತ್ತು ಭಯದಿಂದ ಸಂಭವಿಸಿವೆ ಎಂದು ಅಭಿಪ್ರಾಯಪಟ್ಟರು.
ಕೊರೋನ ಸೋಂಕಿನ ಸೂಚನೆ ಕಂಡು ಬಂದ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೆ ಸಾವು ಸಂಭವಿಸುವ ಸಂಭವ ಕಡಿಮೆ ಎಂದು ಹೇಳೀದರು.

ವಲಯ ಅರಣ್ಯಾಧಿಕಾರಿ ಕೊಟ್ರೇಶ್ ಮಾತನಾಡಿ, ಪರಿಸರ ಜಾಗೃತಿ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕಿದೆ. ಪ್ರಕೃತಿ ನಮಗೆ ನೀಡಿರುವ ಕೊಡುಗೆಗಳನ್ನೆಲ್ಲ ನಾವು ಕಲುಷಿತಗೊಳಿಸಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಪರಿಸರ ನಾಶವಾಗಿ ಮನುಕುಲವೂ ವಿನಾಶದ ಅಂಚಿಗೆ ಬಂದು ನಿಲ್ಲಲಿದೆ ಎಂದರು. ಪ್ರಕೃತಿ ಉಳಿದರೆ ಮಾತ್ರ ಮಾನವ ನೆಮ್ಮದಿಯಾಗಿರಲು ಸಾಧ್ಯ ಎಂದ ಅವರು ಅರಣ್ಯ ಹಸಿರಿನ ವಿಸ್ತೀರ್ಣ ಕಡಿಮೆ ಆಗುತ್ತ ಸಾಗಿದೆ ಇದು ಆತಂಕಕಾರಿ ಬೆಳವಣಿಗೆ ಎಂದರು.

ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಕಡ್ಡಾಯ ಮುಖಗವಸು ಧರಿಸುವ ಬಗ್ಗೆ ಮತ್ತು ಸ್ಯಾನಿಟೈಸರ್ ಬಳಸುವ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರುರಿನ ನಾಡ್ನಳ್ಳಿ ಗ್ರಾಮದ ವಿದ್ಯಾ ಜ್ಯೋತಿ ಶಾಲೆಯ ಬಡ ವಿದ್ಯಾರ್ಥಿಗೆ ರೂ. 14 ಸಾವಿರಗಳ ನೆರವನ್ನು ಕ್ಲಬ್ ವತಿಯಿಂದ ನೀಡಲಾಯಿತು.
ದಿನಾಚರಣೆ ಅಂಗವಾಗಿ ಅರಣ್ಯ ಕ್ವಾಟ್ರಸ್ ಆವರಣದಲ್ಲಿ 50ಕ್ಕೂ ಹೆಚ್ಚು ಸಸಿ ನೆಡಲಾಯಿತು. ಈ ಸಂದರ್ಭ ಉಪವಲಯ ಅರಣ್ಯಾಧಿಕಾರಿ ಕೆ. ಸಿ. ನಾರಾಯಣ ಮೋಲಿ ಉಪಸ್ಥಿತರಿದ್ದರು.