ಸೀಲ್ ಡೌನ್ ಪ್ರದೇಶದ ಕುರಿತು ಜಿಲ್ಲಾಧಿಕಾರಿ ಸ್ಪಷ್ಠೀಕರಣ

23/07/2020

ಮಡಿಕೇರಿ ಜು. 23 : ಕೋವಿಡ್-19 ಸೋಂಕಿತ ಪ್ರಕರಣಗಳಲ್ಲಿ ಸೀಲ್‍ಡೌನ್ ಮಾಡುವ ಕಾರ್ಯ ವಿಧಾನದ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಗೊಂದಲಗಳಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಈ ಸಂಬಂಧ ಜಿಲ್ಲಾಡಳಿತ ವತಿಯಿಂದ ಸ್ಪಷ್ಟೀಕರಣ ನೀಡಲಾಗಿದೆ. ಮಾಹಿತಿ ಇಂತಿದೆ.
ವ್ಯಕ್ತಿಗೆ ಕೋವಿಡ್-19 ಸೋಂಕು ದೃಢಪಟ್ಟಲ್ಲಿ, ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ನಿಯಮಾನುಸಾರ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಸೋಂಕಿತ ವ್ಯಕ್ತಿ ವಾಸವಿದ್ದ ಪ್ರದೇಶವನ್ನು 14 ದಿನಗಳ ಕಾಲ ಸೀಲ್‍ಡೌನ್ ಮಾಡಲಾಗುತ್ತದೆ. ಈ ಅವಧಿಯಲ್ಲಿ ಆ ಪ್ರದೇಶದಲ್ಲಿ ಹೊಸ ಪ್ರಕರಣ ವರದಿಯಾದಲ್ಲಿ ಕೊನೆಯ ಪ್ರಕರಣ ವರದಿಯಾದಲ್ಲಿಂದ 14 ದಿನಗಳ ಕಾಲ ಸೀಲ್‍ಡೌನ್ ಚಾಲ್ತಿಯಲ್ಲಿರುತ್ತದೆ.
ಆಸ್ಪತ್ರೆಯ ವೈದ್ಯಾಧಿಕಾರಿ/ ಸಹಾಯಕ ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟಲ್ಲಿ, ಅವರನ್ನು 10 ದಿನಗಳ ಕಾಲ ಹೋಂ ಐಸೋಲೇಷನ್ ನಲ್ಲಿ ಇರಿಸಲಾಗುವುದು ಮತ್ತು ಆಸ್ಪತ್ರೆಯನ್ನು ಸೋಂಕು ನಿವಾರಣೆಗೊಳಿಸಿ ಬದಲಿ ವೈದ್ಯಾಧಿಕಾರಿಗಳು ಲಭ್ಯರಿದ್ದಲ್ಲಿ ಅವರ ಮುಖಾಂತರ ಆಸ್ಪತ್ರೆಯನ್ನು 24 ರಿಂದ 48 ಗಂಟೆಗಳ ಒಳಗಾಗಿ ಮರು ಆರಂಭಿಸಲಾಗುವುದು.
ಅಂಗಡಿ ಮಳಿಗೆಗಳಿಗೆ ಸೋಂಕಿತ ವ್ಯಕ್ತಿ ಭೇಟಿ ನೀಡಿದ್ದಲ್ಲಿ ಮಳಿಗೆಯನ್ನು ಸೋಂಕು ನಿವಾರಣೆಗೊಳಿಸುವ ಬಗ್ಗೆ ಕನಿಷ್ಟ 24 ರಿಂದ 48 ಗಂಟೆಗಳ ಕಾಲ ಬಂದ್ ಮಾಡಲಾಗುವುದು. ಅಂಗಡಿ ಮಳಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು, ಸೋಂಕಿತರ ಪ್ರಾಥಮಿಕ ಸಂಪರ್ಕಗಳಾಗಿರುವುದರಿಂದ ಅಂದಿನಿಂದಲೇ ಗೃಹ ಸಂಪರ್ಕ ತಡೆಯಲ್ಲಿ ಇರತಕ್ಕದ್ದು. ಅವರ ಮಾದರಿ ಪರೀಕ್ಷೆಯನ್ನು 10 ನೇ ದಿನ ನಡೆಸಲಾಗುವುದು. ಪರೀಕ್ಷಾ ವರದಿ ಬರುವವರೆಗೆ ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿಯೇ ಇರಬೇಕು. ಮಳಿಗೆ ನಡೆಸಲು ಪರ್ಯಾಯ ಸಿಬ್ಬಂದಿಗಳಿದ್ದಲ್ಲಿ ಮಳಿಗೆಯನ್ನು ಸೋಂಕು ನಿವಾರಣೆಗೊಳಿಸಿದ ನಂತರ ಕಾರ್ಯಾಚರಿಸಲು ಅವಕಾಶ ನೀಡಲಾಗುವುದು.
ಅಂಗಡಿ ಮಳಿಗೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸೋಂಕು ದೃಢಪಟ್ಟಿದ್ದಲ್ಲಿ ಅಥವಾ ಅವರು ಸೋಂಕಿತರ ಪ್ರಾಥಮಿಕ ಸಂಪರ್ಕಗಳಾಗಿದ್ದ ಪಕ್ಷದಲ್ಲಿ ಮಳಿಗೆ ನಡೆಸಲು ಪರ್ಯಾಯ ಸಿಬ್ಬಂದಿಗಳ ಲಭ್ಯತೆ ಇರದಿದ್ದಲ್ಲಿ ಸದರಿ ಮಳಿಗೆಯನ್ನು ನಿಯಮಾನುಸಾರ 14 ದಿನಗಳ ಕಾಲ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.