ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರಪೇಟೆಯಲ್ಲಿ ಸಿಐಟಿಯು ಪ್ರತಿಭಟನೆ

ಮಡಿಕೇರಿ ಜು. 23 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು)ವತಿಯಿಂದ ಸೋಮವಾರಪೇಟೆ ತಾಲೂಕು ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಯಿತು.
ಕೋವಿಡ್-19 ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಪರಿಣಾಮ ರೈತರು, ಕೂಲಿಕಾರರು ಮತ್ತು ಕಾರ್ಮಿಕರು ಗಂಭೀರ ಸಂಕಷ್ಟಗಳಿಗೆ ತುತ್ತಾಗಿದ್ದು ಕೂಡಲೆ ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗದುಕೊಳ್ಳಬೇಕು. ರೈತವಿರೋಧಿ ತಿದ್ದುಪಡಿ, ಸಾರ್ವಜನಿಕ ರಂಗದ ಕೈಗಾರಿಕೆಗಳು ಹಾಗೂ ಹಣಕಾಸು ಸಂಸ್ಥೆಗಳ ಖಾಸಗೀಕರಣವನ್ನು ತಡೆಹಿಡಿಯಬೇಕೆಂದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದೇಶವಾಸಿಗಳು ಆರೋಗ್ಯ, ಆರ್ಥಿಕ ಸಂಕಷ್ಟದಲ್ಲಿರುವಾಗ ದೇಶದ ಸಂಪತ್ತನ್ನು ಲೂಟಿ ಮಾಡಲು ಕಾರ್ಪೋರೇಟ್ ಕಂಪನಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಜನದ್ರೋಹಿ ತಿದ್ದುಪಡಿಗಳನ್ನು ತರಲಾಗುತ್ತಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಐಟಿಯುನ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅರೋಪಿಸಿದರು.
ಕೋವಿಡ್-19 ಸೋಂಕನ್ನು ಪರಿಣಾಮಕಾರಿ ಎದುರಿಸಲು ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ನಾಗರೀಕರಿಗೆ ಉಚಿತ ಹಾಗೂ ಸುರಕ್ಷಾ ಚಿಕಿತ್ಸೆ ದೊರೆಯವಂತೆ ಕ್ರಮವಹಿಸಬೇಕು. ತೆರಿಗೆ ವ್ಯಾಪ್ತಿಗೆ ಬಾರದ ದೇಶದ ಎಲ್ಲಾ ಕುಟುಂಬಗಳಿಗೆ ಕನಿಷ್ಠ 7,500 ರೂ. ಮಾಸಿಕ ನೆರವು ಪ್ರಕಟಿಸಬೇಕು. ಸಾಮಾಗ್ರಿಗಳ ಕಿಟ್ ವಿತರಿಸಬೇಕು. ನಿರುದ್ಯೋಗಿ ಯುವಕ, ಯುವತಿಯರಿಗೆ ನಿರುದ್ಯೋಗ ಭತ್ಯೆ ಕನಿಷ್ಠ 10 ಸಾವಿರ ರೂ.ಗಳನ್ನು ನೀಡಬೇಕೆಂದು ಆಗ್ರಹಿಸಿದ ಭರತ್, ವಿವಿಧ ಬೇಡಿಕೆಯುಳ್ಳ ಮನವಿ ಪತ್ರವನ್ನು ಶಿರಸ್ತೇದಾರ್ ಮಹೇಶ್ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದರು.
ಸಂಘಟನೆಯ ಪ್ರಮುಖರಾದ ಭಾಗೀರಥಿ, ಭಾರತಿ, ಸಾವಿತ್ರಿ, ಚಂದ್ರನ್, ಉಮೇಶ್, ನವೀನ್ ಇದ್ದರು.
