ಸಿಇಟಿ ಪರೀಕ್ಷೆ ಸುಸೂತ್ರವಾಗಿ ನಡೆಸಿ : ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಸೂಚನೆ

23/07/2020

ಮಡಿಕೇರಿ ಜು.23 : ಜಿಲ್ಲೆಯಲ್ಲಿ 1200 ವಿದ್ಯಾರ್ಥಿಗಳು ಈ ಬಾರಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಲಿದ್ದು, ಸಮನ್ವಯತೆಯಿಂದ ಹಾಗೂ ಸುಸೂತ್ರವಾಗಿ ಪರೀಕ್ಷೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಬಗ್ಗೆ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದಿನ ವರ್ಷಗಳಿಗಿಂತ ಈ ಬಾರಿ ಪರಿಸ್ಥಿತಿ ಬೇರೆಯೆ ಇದೆ. ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಪರೀಕ್ಷೆ ನಡೆಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೋವಿಡ್-19 ಹಿನ್ನೆಲೆ ಕಂಟೈನ್‍ಮೆಂಟ್ ವಲಯದಿಂದ ಬರುವ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಅಲ್ಲದೇ ಆ ವಿದ್ಯಾರ್ಥಿಗಳನ್ನು ಪರೀಕ್ಷೆ ಸಂದರ್ಭ ಅವರಿರುವ ಸ್ಥಳದಿಂದ ಪರೀಕ್ಷಾ ಸ್ಥಳಕ್ಕೆ ಬಂದು ಪರೀಕ್ಷೆ ಬರೆಯುವಂತೆ ಹಾಗೂ ಮತ್ತೆ ಅವರನ್ನು ಮನೆಗೆ ಕಳುಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಿ. ಯಾವುದೇ ಒಬ್ಬ ವಿದ್ಯಾರ್ಥಿಯೂ ಸಿಇಟಿ ಪರೀಕ್ಷೆಯಿಂದ ವಂಚಿತರಾಗದಂತೆ ಗಮನಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ನಿರ್ದೇಶನ ನೀಡಿದರು.
ಪರೀಕ್ಷಾ ಸಂದರ್ಭ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಪರೀಕ್ಷಾ ಸಂದರ್ಭ ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೂಕ್ತ ಬಸ್ ವ್ಯವಸ್ಥೆ ಮಾಡುವಂತೆ ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕರಾದ ಎಚ್.ಗೀತಾ ಅವರಿಗೆ ಸೂಚನೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಿವಲಿಂಗ ಶೆಟ್ಟಿ ಅವರು, ಜಿಲ್ಲೆಯಲ್ಲಿ ಈ ಬಾರಿ 1,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ 4 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 504 ವಿದ್ಯಾರ್ಥಿಗಳು, ಸಂತ ಜೋಸೆಫರ ಕಾಲೇಜು 312 ವಿದ್ಯಾರ್ಥಿಗಳು, ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 216 ಮತ್ತು ಸೋಮವಾರ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 168 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದರು.
ಐಟಿಡಿಪಿ ಇಲಾಖೆಯ ಅಧಿಕಾರಿ ಶಿವಕುಮಾರ್, ಡಿವೈಎಸ್‍ಪಿ ದಿನೇಶ್ ಕುಮಾರ್, ತಹಶೀಲ್ದಾರರಾದ ಗೋವಿಂದ ರಾಜು, ನಂದೀಶ್, ತಾಲೂಕು ಪಂಚಾಯಿತಿ ಇಒ ಲಕ್ಷ್ಮೀ, ಸುನೀಲ್ ಕುಮಾರ್, ಪ್ರಾಂಶುಪಾಲರಾದ ವಿಜಯನ್, ಮಹಾಲಿಂಗಯ್ಯ, ಬೆಳ್ಳಿಯಪ್ಪ, ಜೆ.ಸೋಮಣ್ಣ, ಶೋಭಾ, ಜ್ಯೋತಿ, ಪ್ರಾದೇಶಿಕ ಸಾರಿಗೆ ಕಚೇರಿಯ ರೀಟಾ ಇತರರು ಇದ್ದರು.

ಮತ್ತಷ್ಟು ಮಾಹಿತಿ: ರಾಜ್ಯದಾದ್ಯಂತ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಜುಲೈ 30 ಹಾಗೂ 31 ರಂದು ನಡೆಯಲಿದೆ. ಜಿಲ್ಲೆಯಲ್ಲಿ ಐದು ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.
ಮಡಿಕೇರಿಯ ಸೇಂಟ್ ಜೋಸೆಫ್ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೋಮವಾರಪೇಟೆ ಪದವಿ ಪೂರ್ವ ಕಾಲೇಜು, ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಒಂದು ವೇಳೆ ಕೋವಿಡ್ ಸೋಂಕಿತ ಪರೀಕ್ಷಾರ್ಥಿಗಳು ಇದ್ದಲ್ಲಿ ಗಾಳಿಬೀಡು ಕೋವಿಡ್ ಸೆಂಟರ್ (ಜವಹಾರ್ ನವೋದಯ ವಿದ್ಯಾಲಯ ) ನಲ್ಲಿ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವ ಸಲುವಾಗಿ, ಪರೀಕ್ಷಾ ಕೇಂದ್ರಗಳಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸುವುದು, ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ ನಂತರವೇ ಕೊಠಡಿಗಳಿಗೆ ಕಳುಹಿಸಬೇಕು, ಪರೀಕ್ಷಾ ಕೇಂದ್ರಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಮುಖಗವುಸು ಧರಿಸಿ ಬರಬೇಕು. ಪರೀಕ್ಷಾರ್ಥಿಗಳಿಗೆ ಕೋವಿಡ್-19 ದೃಢಪಟ್ಟಿದಲ್ಲಿ, ಅವರ ಆರೋಗ್ಯ ಉತ್ತಮವಾಗಿದ್ದಲ್ಲಿ ಅವರಿಗೆ ಮಡಿಕೇರಿಯ ನವೋದಯ ವಿದ್ಯಾಲಯದಲ್ಲಿ ತೆರೆದಿರುವ ಕೋವಿಡ್ ಕೇರ್ ಸೇಂಟರ್‍ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು ಈ ಬಗ್ಗೆ ಪರೀಕ್ಷಾರ್ಥಿಯು ಮೊದಲೇ ಸಂಬಂಧಪಟ್ಟ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಬೇಕು.
ಕೋವಿಡ್ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತ ಪರೀಕ್ಷಾರ್ಥಿಗಳು ಮತ್ತು ನಿಯಂತ್ರಿತ ಪ್ರದೇಶದಿಂದ ಪರೀಕ್ಷೆ ಬರೆಯಲು ಬರುವ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿಯೇ ಪ್ರತ್ಯೇಕ ಅವಕಾಶ ಕಲ್ಪಿಸಲಾಗುವುದು, ನಿಯಂತ್ರಿತ ಪ್ರದೇಶದಿಂದ ಬರುವ ಪರೀಕ್ಷಾರ್ಥಿಗಳೊಂದಿಗೆ ಒಬ್ಬ ಪೋಷಕರು ಮಾತ್ರ ಬರಲು ಅವಕಾಶವಿದೆ. ನಿಯಂತ್ರಿತ ಪ್ರದೇಶದಿಂದ ಪರೀಕ್ಷೆ ಬರೆಯಲು ಬರುವ ಪರೀಕ್ಷಾರ್ಥಿಗಳು ಮುಂಚಿತವಾಗಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಬೇಕು.