ಆರೋಗ್ಯ ಕಾರ್ಯಕರ್ತರಿಗೆ ಡಿಸಿಸಿ ಬ್ಯಾಂಕ್‍ನಿಂದ ಪ್ರೋತ್ಸಾಹ ಧನ ಚೆಕ್ ವಿತರಣೆ

23/07/2020

ಮಡಿಕೇರಿ ಜು.23 : ಆರೋಗ್ಯ ಕಾರ್ಯಕರ್ತರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಿಬ್ಬಂದಿಗಳು ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದು, ಅವರ ಕರ್ತವ್ಯ ನಿಷ್ಠೆ ಮೆಚ್ಚುವಂತದ್ದು ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ಹೇಳಿದ್ದಾರೆ.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ತಲಾ 3 ಸಾವಿರ ರೂ ಗಳ ಪ್ರೋತ್ಸಾಹ ಧನದ ಚೆಕ್ ವಿತರಿಸಿ ಅವರು ಮಾತನಾಡಿದರು.
ಈ ಹಿಂದೆ ಸಹಕಾರ ಸಚಿವರಾದ ಎಸ್.ಟಿ ಸೋಮಶೇಖರ್ ಅವರು ಆಶಾ ಕಾರ್ಯಕರ್ತರಿಗೆ ಚೆಕ್ ವಿತರಿಸಿದ್ದರು. ಆ ಬಳಿಕ ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿತ್ತು. ಈ ನಿಟ್ಟಿನಲ್ಲಿ ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರಿಗೆ 3 ಸಾವಿರ ರೂ. ಗಳ ಪ್ರೋತ್ಸಾಹ ಧನ ಚೆಕ್ ವಿತರಿಸಲಾಗುತ್ತಿದೆ ಎಂದರು.
ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಡಿಸಿಸಿ ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲೀಂ ಅವರು ಮಾತನಾಡಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಡಾಟಾ ಎಂಟ್ರಿ ಆಪರೇಟರ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ 5 ಜನ, ಅಡುಗೆ ಮತ್ತು ದೋಭಿ ಕಾರ್ಯ ನಿರ್ವಹಿಸುತ್ತಿರುವ 4, ಶಸ್ತ್ರಚಿಕಿತ್ಸೆ ವಿಭಾಗದ 6 ತಂತ್ರಜ್ಞರು, 1 ಭದ್ರತಾ ಸಿಬ್ಬಂದಿ, ಎಲೆಕ್ಟ್ರಿಷೀಯನ್ ಮತ್ತು ಪ್ಲಂಬರ್ ವಿಭಾಗದ 3, ಗ್ರೂಪ್ ಡಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ 5 ಮತ್ತು 1 ಸಫಾಯಿ ಕರ್ಮಚಾರಿ ಸೇರಿದಂತೆ 25 ಮಂದಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ಸಾಂಕೇತಿಕವಾಗಿ 4 ಜನರಿಗೆ ಚೆಕ್ ವಿತರಣೆ ನೆರವೇರಿತು. ಬಳಿಕ ಕೊಡಗು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ವಿಶಾಲ್ ಮಾತನಾಡಿದರು.

ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಕೇಟೋಳಿರ ಎಸ್.ಪೂವಯ್ಯ, ಬ್ಯಾಂಕಿನ ನಿರ್ದೇಶಕರುಗಳಾದ ಬಿ.ಕೆ.ಚಿಣ್ಣಪ್ಪ, ಎಚ್.ಎಂ ರಮೇಶ್, ಪಟ್ರಪಂಡ ರಘು ನಾಣಯ್ಯ, ಎಸ್.ಬಿ ಭರತ್ ಕುಮಾರ್, ಬಿ.ಡಿ ಮಂಜುನಾಥ್, ಕೋಲತಂಡ ಎ.ಸುಬ್ರಮಣಿ, ಕನ್ನಂಡ ಸಂಪತ್, ಎ.ಕೆ.ಮನು ಮುತ್ತಪ್ಪ, ಕಿಮ್ಮುಡೀರ ಎ.ಜಗದೀಶ್, ಉಷಾ ತೇಜಸ್ವಿ, ಕೆ.ಅರುಣ್ ಭೀಮಯ್ಯ, ಎ.ಗೋಪಾಲಕೃಷ್ಣ ಇತರರು ಇದ್ದರು.