ಬೀದಿಗೆ ಬಿತ್ತು ಮಡಿಕೇರಿ ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಮಿಕ ದಂಪತಿ ಬದುಕು

23/07/2020

ಮಡಿಕೇರಿ ಜು.23 : ಬದುಕಿನುದ್ದಕ್ಕೂ ಮಡಿಕೇರಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವೃದ್ಧ ದಂಪತಿಗಳು ಈಗ ಬೀದಿಗೆ ಬಿದ್ದಿದ್ದಾರೆ.
ಬಸ್ ನಿಲ್ದಾಣದಲ್ಲಿ ಹತ್ತಾರು ವರ್ಷಗಳಿಂದ ಸ್ವಚ್ಛತಾ ಕಾರ್ಮಿಕರಾಗಿ ಚಿಕ್ಕ ಹಾಗೂ ಜಯಮ್ಮ ವೃದ್ಧ ದಂಪತಿ ದುಡಿಯುತ್ತಿದ್ದರು. ಆದರೆ ಕೊರೊನಾ ಲಾಕ್ ಡೌನ್ ಈ ಸ್ವಚ್ಛತಾ ಕಾರ್ಮಿಕರ ಕೆಲಸವನ್ನೂ ಕಿತ್ತುಕೊಂಡಿದೆ. ಇದೀಗ ಕೂಲಿಯೂ ಇಲ್ಲದೆ, ಆಶ್ರಯಕ್ಕೊಂದು ತಾಣವಿಲ್ಲದೆ ಯಾರದ್ದೋ ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಮಳೆ, ಬಿಸಿಲಿನಲ್ಲಿ ಬದುಕು ಸಾಗಿಸುವಂತ್ತಾಗಿದೆÉ.
ಒಮ್ಮೆ ಬಸ್‍ನಿಂದ ಬಿದ್ದು ಸೊಂಟ ಮುರಿದುಕೊಂಡಿರುವ ವೃದ್ಧೆ ಜಯಮ್ಮ ಅವರಿಗೆ ಈಗ ನಡೆದಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗುಡಿಸಲು ಬಿಟ್ಟು ಎಲ್ಲೂ ಹೋಗುತ್ತಿಲ್ಲ. ಇನ್ನು ಕಣ್ಣು ಕಾಣದ ಪತಿ ಚಿಕ್ಕ ಪತ್ನಿಯ ಸ್ಥಿತಿ ನೋಡಿ ಕಂಗಾಲಾಗಿ ಕಣ್ಣೀರುಡುತ್ತಿದ್ದಾರೆ. ದಿಕ್ಕಿಲ್ಲದ ಈ ವೃದ್ಧ ದಂಪತಿ ಕನಿಷ್ಟ ಊಟಕ್ಕೂ ಪರದಾಡುತ್ತಿದ್ದಾರೆ.
ಈ ವೃದ್ಧ ದಂಪತಿಯ ಸ್ಥಿತಿಯನ್ನು ಕೆಲವು ತಿಂಗಳಿಂದ ಗಮನಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರಿನ ಬಾರ್ ವೊಂದರ ನೌಕರರೊಬ್ಬರು ಇವರಿಗೆ ಪ್ರತಿ ದಿನ ಊಟ ತಿಂಡಿ ಪೂರೈಸುತ್ತಿದ್ದಾರೆ. ತಾತ್ಕಾಲಿಕ ಗುಡಿಸಲು ಕಟ್ಟಿಕೊಂಡು ಜೀವಿಸುತ್ತಿರುವ ವೃದ್ಧ ದಂಪತಿಗಳು ಈಗ ಈ ಆಶ್ರಯತಾಣವನ್ನೂ ಕಳೆದುಕೊಳ್ಳುವ ಆತಂಕವನ್ನು ಎದುರಿಸುತ್ತಿದ್ದಾರೆ. ಖಾಸಗಿ ಜಾಗದ ಮಾಲೀಕರು ಗುಡಿಸಲನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಈ ಅನಾಥ ದಂಪತಿಗಳಿಗೆ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಲು ಸಮಾಜ ಸೇವಕರು ಮುಂದೆ ಬರಬೇಕಿದೆ.